ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ತಮಿಳುನಾಡು ಮಾಜಿ ಸಿಎಂ ಆಪ್ತೆ ಶಶಿಕಲಾ ನಟರಾಜನ್ ನ್ಯಾಯಾಲಯದ ಆದೇಶದಂತೆ 10 ಕೋಟಿ ರೂಪಾಯಿ ದಂಡ ಪಾವತಿಸಿದ್ದಾರೆ.
ದಂಡದ ಮೊತ್ತವನ್ನು ನಿನ್ನೆ ಸಂಜೆ ಡಿಮ್ಯಾಂಡ್ ಡ್ರಾಪ್ಟ್ ಮೂಲಕ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ನ ಕಚೇರಿಗೆ ಸಲ್ಲಿಸಲಾಗಿದೆ. ಈ ಮೊತ್ತವನ್ನು ಆಕ್ಸಿಸ್ ಬ್ಯಾಂಕ್ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ನ ಎರಡು ಡಿಮ್ಯಾಂಡ್ ಡ್ರಾಫ್ಟ್ ಗಳಲ್ಲಿ ತುಂಬಿ, ಬಳಿಕ ಅವುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಈ ದಂಡದ ಮೊತ್ತವನ್ನು ಶಶಿಕಲಾ ಪರವಾಗಿ ರಾಜಕೀಯ ನಾಯಕರೊಬ್ಬರು ಪಾವತಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಶಶಿಕಲಾ ಪರ ವಕೀಲ ರಾಜಾ ಸೆಂತೂರ್ ಪಾಂಡ್ಯನ್ ಅವರು, ದಂಡ ಪಾವತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇಂದು ಸಂಜೆ ಈ ಕುರಿತು ಮಾಧ್ಯಮಗಳಿಗೆ ಸ್ಪಷ್ಟನೆ ನೀಡುತ್ತೇವೆ ಎಂದಿದ್ದಾರೆ.
ಪ್ರಕರಣದ ಹಿನ್ನೆಲೆ : ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆ 2017 ರ ಫೆ. 15ರಂದು ಜಯಲಲಿತಾ, ಶಶಿಕಲಾ, ಇಳವರಸಿ ಹಾಗೂ ಸುಧಾಕರನ್ಗೆ ಬೆಂಗಳೂರಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಾನ್ ಮೈಕೆಲ್ ಕುನ್ಹ ಅವರು ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದರು. ಅಲ್ಲದೇ ಜಯಲಲಿತಾ 100 ಕೋಟಿ ರೂ. ದಂಡ, ಶಶಿಕಲಾ ಸೇರಿದಂತೆ ಮೂವರಿಗೆ ತಲಾ 10 ಕೋಟಿ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದರು. ಆದರೆ ತೀರ್ಪು ಬರುವ ಮುನ್ನವೇ ಜಯಲಲಿತಾ ಅನಾರೋಗ್ಯದಿಂದ ಮೃತಪಟ್ಟಿದ್ದರು. ಇನ್ನುಳಿದ ಮೂವರು ಅಪರಾಧಿಗಳು 2017ರ ಫೆ. 15ರಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು.
ಶಿಕ್ಷೆಯ ಅವಧಿ 2021ರ ಜನವರಿ 27ಕ್ಕೆ ಮುಗಿಯಲಿದ್ದರೂ ದಂಡ ಪಾವತಿಸದಿದ್ದರೆ ಮತ್ತೊಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕು. ಈ ಹಿನ್ನೆಲೆಯಲ್ಲಿ ದಂಡ ಪಾವತಿಸಿ ಶಶಿಕಲಾ ಬಿಡುಗಡೆ ಮಾಡಿಸಲು ಪ್ರಕ್ರಿಯೆ ಆರಂಭವಾಗಿದೆ.