ಬೆಂಗಳೂರು: ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣದ ತನಿಖೆಯನ್ನು ಕೇಂದ್ರ ಕಾರ್ಪೋರೇಟ್ ಸಚಿವಾಲಯದ (ಎಸ್ಎಫ್ಐಓ)ಗೆ ವಹಿಸುವ ಸಾಧ್ಯತೆ ದಟ್ಟವಾಗಿದೆ.
ರಿಜಿಸ್ಟಾರ್ ಆಫ್ ಕಂಪೆನಿಸ್ ಬೆಂಗಳೂರು ಕಚೇರಿಯ ಅಧಿಕಾರಿಗಳು ಎಸ್ಎಫ್ಐಓ(SFIO) ತನಿಖೆ ನಡೆಸುವಂತೆ ಶಿಫಾರಸ್ಸು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಒಮ್ಮೆ ಎಸ್ಎಫ್ಐಓ ತನಿಖೆ ಆರಂಭಿಸಿದರೆ ಪ್ರಕರಣಗಳನ್ನು ವರ್ಗಾಯಿಸಬೇಕಾಗುತ್ತದೆ ಹಾಗೂ ಬೇರೆ ತನಿಖಾ ಸಂಸ್ಥೆಗಳು ತನಿಖೆ ನಡೆಸಲು ಸಾಧ್ಯವಿರುವುದಿಲ್ಲ.
ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಅಲಿ ಖಾನ್ ಕಳೆದ ಜು.19ರಂದು ಭಾರತಕ್ಕೆ ಬಂದಿದ್ದು, ಆತನನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿ, ವಿಚಾರಣೆ ನಡೆಸಿದ್ದರು. ಆರೋಪಿ ಆ.14ರ ವರೆಗೆ ಎಸ್ಐಟಿ ಕಸ್ಟಡಿಯಲ್ಲಿರಲಿದ್ದಾರೆ.
2003 ರಲ್ಲಿ ಎಸ್ಎಫ್ಐಒ ಸ್ಥಾಪನೆಯಾಗಿದ್ದು, ಪ್ರತಿಷ್ಠಿತ ಕಾರ್ಪೋರೇಟ್ ಕಂಪೆನಿಗಳ ವಂಚನೆ ಸೇರಿದಂತೆ 350ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಹಣಕಾಸು, ಷೇರು, ಕಸ್ಟಮ್ಸ್, ಮಾರುಕಟ್ಟೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆಯನ್ನು ಈ ಸಂಸ್ಥೆ ನಡೆಸುತ್ತದೆ.