ಬೆಂಗಳೂರು: ಮಕ್ಕಳು ದೇಶದ ಭವಿಷ್ಯ. ನಿಮಗಾಗಿಯೇ ನಾನು ಈ ಕಾರ್ಯಕ್ರಮಕ್ಕೆ ಬಂದಿದ್ದು ಎಂದು ಭಾರತ ರತ್ನ ಸಿ.ಎನ್.ಆರ್.ರಾವ್ ವಿದ್ಯಾರ್ಥಿಗಳನ್ನ ಹುರಿದುಂಬಿಸಿದರು. 107 ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಸಮಾವೇಶದ ಎರಡನೇ ದಿನ ರಾಷ್ಟ್ರೀಯ ಕಿಶೋರ್ ವೈಜ್ಞಾನಿಕ ಸಮ್ಮೇಳನ ನಡೆಯಿತು. ಮಕ್ಕಳ ವಿಜ್ಞಾನ ಕಾಂಗ್ರೆಸ್ ಕಾರ್ಯಕ್ರಮವನ್ನು ಭಾರತ ರತ್ನ ವಿಜ್ಞಾನಿ ಸಿ.ಎನ್.ಆರ್.ರಾವ್ ಉದ್ಘಾಟನೆ ಮಾಡಿದರು. ಇವರಿಗೆ ರಾಜೇಂದ್ರ ಪ್ರಸಾದ್, ಅಖಿಲೇಶ್ ಗುಪ್ತಾ ಸೇರಿದಂತೆ ಇತರರು ಸಾಥ್ ನೀಡಿದರು.
ಉದ್ಘಾಟನೆ ಬಳಿಕ ಮಾತಾನಾಡಿದ ಸಿ.ಎನ್.ಆರ್.ರಾವ್, ವಿಜ್ಞಾನದಲ್ಲಿ ಆವಿಷ್ಕಾರಕ್ಕೆ ಕೊನೆಯೇ ಇಲ್ಲ. ಎಷ್ಟು ಆವಿಷ್ಕಾರಗಳನ್ನ ಮಾಡುತ್ತಾ ಹೋದರು ಮಾಡುತ್ತಲೇ ಇರಬಹುದು. ನಾನೊಬ್ಬ ವಿಜ್ಞಾನಿ ಆಗಿರುವುದು ನಿಜಕ್ಕೂ ಖುಷಿ ನೀಡುತ್ತೆ. ಶಕ್ತಿಶಾಲಿ ರಾಷ್ಟ್ರ ನಿರ್ಮಾಣಕ್ಕೆ ವಿಜ್ಞಾನ ಎಂಬ ಮಹಾಶಕ್ತಿ ಒಟ್ಟಿಗೆ ಇರಬೇಕು. ಗ್ರಾಮೀಣ ಭಾಗದ ಮಕ್ಕಳಲ್ಲಿ ಸಾಕಷ್ಟು ಪ್ರತಿಭೆ ಇರುತ್ತವೆ. ಅದನ್ನು ಹೊರತರುವ ಕೆಲಸ ಆಗಬೇಕು. ಇದರಿಂದ ನಮ್ಮ ದೇಶಕ್ಕೆ ಸಾಕಷ್ಟು ಉಪಯೋಗ ಆಗುತ್ತೆ ಎಂದು ಹೇಳಿದರು.
ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಅಡಾ ಯೋನತ್ ಮಾತನಾಡಿ, ನನಗೆ ಬಾಲ್ಯದಿಂದಲೂ ವಿಜ್ಞಾನದ ಮೇಲೆ ಆಸಕ್ತಿ ಇತ್ತು. ನಮ್ಮದು ಶ್ರೀಮಂತ ಕುಟುಂಬ ಅಲ್ಲ, ನಾನು ಬಾಲ್ಯದಲ್ಲಿ ವಿಜ್ಞಾನ ಪ್ರಯೋಗ ಮಾಡಲು ಮನೆಯ ವರಾಂಡವನ್ನು ಬಳಸುತ್ತಿದ್ದೆ. ಲೆಕ್ಕವಿಲ್ಲದಿರುವಷ್ಟು ಪ್ರಯೋಗಗಳು ಕೈಕೊಟ್ಟಿತ್ತು. ಆದರೂ ಛಲ ಬಿಡದೇ ವಿಜ್ಞಾನದಿಂದಲೇ ಹೊಸತನನ್ನು ಆವಿಷ್ಕಾರ ಮಾಡಬಹುದು ಎಂಬ ಮನಸ್ಥಿತಿ ನನ್ನದಾಗಿತ್ತು. ಆ ಮನಸ್ಥಿತಿಯೇ ನನಗೆ ನೊಬೆಲ್ ಪ್ರಶಸ್ತಿ ತಂದುಕೊಟ್ಟಿತ್ತು ಅಂತ ಹೇಳಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ನೆರೆದಿದ್ದ ಮಕ್ಕಳಿಗೆ ನೀವು ಸಹ ಛಲಬಿಡದೇ ವಿಜ್ಞಾನದ ಪ್ರಯೋಗ ಮಾಡಿ. ಒಂದಲ್ಲ ಒಂದು ದಿನ ನೊಬೆಲ್ ಪ್ರಶಸ್ತಿ ಲಭಿಸುತ್ತದೆ ಎಂದು ಪ್ರೋತ್ಸಾಹದ ಮಾತುಗಳನ್ನಾಡಿದರು.