ಬೆಂಗಳೂರು: ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷರ ಹುದ್ದೆಗೆ ಶಾಸಕ ನೆಹರು ಓಲೇಕಾರ್ ಅವರನ್ನು ನೇಮಕ ಮಾಡಲು ವಿಶೇಷ ಜ್ಞಾನ ಇದೆ ಎಂಬುದನ್ನು ಯಾರು ಮತ್ತು ಹೇಗೆ ನಿರ್ಧರಿಸಿದರು ಎಂಬ ಬಗ್ಗೆ ವಿವರಣೆ ನೀಡುವಂತೆ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ನೆಹರು ಓಲೇಕಾರ್ ನೇಮಕ ಪ್ರಶ್ನಿಸಿ ಕೆ.ಸಿ.ರಾಜಣ್ಣ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ, ನೇಮಕಾತಿಗೆ ಸಂಬಂಧಿಸಿದ ಕಡತವನ್ನು ಸರ್ಕಾರದ ಪರ ವಕೀಲರು ಪೀಠಕ್ಕೆ ಸಲ್ಲಿಸಿದರು.
ದಾಖಲೆಗಳನ್ನು ಪರಿಶೀಲಿಸಿದ ಪೀಠ, ಮುಖ್ಯಮಂತ್ರಿ ಆದೇಶದಂತೆ ಆಯೋಗದ ಅಧ್ಯಕ್ಷರನ್ನು ನೇಮಕ ಮಾಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಈ ಆದೇಶ ಹೊರತುಪಡಿಸಿ ಬೇರೆ ಯಾವ ದಾಖಲೆಯೂ ಸರ್ಕಾರದ ಕಡತದಲ್ಲಿ ಇಲ್ಲ.
ಕಾಯ್ದೆ ಪ್ರಕಾರ ಎಸ್ಸಿ-ಎಸ್ಟಿ ವರ್ಗಗಳ ಆಯೋಗಕ್ಕೆ ಅಧ್ಯಕ್ಷರಾಗಿ ನೇಮಕಗೊಳ್ಳುವವರಿಗೆ ಸಮುದಾಯದ ಬಗ್ಗೆ ವಿಶೇಷ ಜ್ಞಾನ ಇರಬೇಕು. ಆದರೆ, ಅಧ್ಯಕ್ಷರಾಗಿ ನೇಮಕ ಮಾಡುವಾಗ ನೆಹರು ಓಲೇಕಾರ್ ಅವರಿಗೆ ಸಮುದಾಯಗಳ ಬಗ್ಗೆ ವಿಶೇಷ ಜ್ಞಾನ ಇದೆ ಎಂದು ನಿರ್ಧರಿಸಿದ್ದು ಯಾರು ಮತ್ತು ಹೇಗೆ ಎಂಬುದು ನಮಗೆ ತಿಳಿಯಬೇಕು.
ಹೀಗಾಗಿ, ಈ ಕುರಿತು ವಿವರಣೆ ನೀಡಬೇಕೆಂದು ಸರ್ಕಾರದ ಪರ ವಕೀಲರಿಗೆ ಸೂಚಿಸಿ, ಮೇ 28ಕ್ಕೆ ವಿಚಾರಣೆ ಮುಂದೂಡಿತು. ಇದೇ ವೇಳೆ ಓಲೆಕಾರ್ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆಯೂ ವಿವರಣೆ ನೀಡುವಂತೆ ಸೂಚಿಸಿತು.
ಅರ್ಜಿದಾರರ ಕೋರಿಕೆ - ಸಿವಿಲ್ ಕೋರ್ಟ್ ದರ್ಜೆ ಹೊಂದಿರುವ ಎಸ್ಸಿ-ಎಸ್ಟಿ ಆಯೋಗಕ್ಕೆ ರಾಜಕೀಯ ವ್ಯಕ್ತಿಯನ್ನು ನೇಮಕ ಮಾಡಲಾಗಿದೆ. ಆದರೆ, ನೆಹರು ಓಲೇಕಾರ್ ವಿರುದ್ಧ ನಾಲ್ಕು ಕ್ರಿಮಿನಲ್ ಪ್ರಕರಣಗಳಿವೆ. ಇಂತಹ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಯನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಸಂವಿಧಾನ ಬಾಹಿರ. ನೇಮಕಾತಿ ವೇಳೆ ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ಪಂಗಡಗಳ ಆಯೋಗ ಕಾಯ್ದೆ-2002ರ ಆಯ್ಕೆ ಮಾನದಂಡಗಳನ್ನು ಕಡೆಗಣಿಸಲಾಗಿದೆ.
ಆದ್ದರಿಂದ ನೆಹರು ಓಲೇಕಾರ್ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿ 2020ರ ನ. 27ರಂದು ಸರ್ಕಾರ ಹೊರಡಿಸಿರುವ ಆದೇಶದ ಸಂಪೂರ್ಣ ಕಡತವನ್ನು ನ್ಯಾಯಾಲಯ ಪರಿಶೀಲಿಸಬೇಕು.
ಆಯೋಗದ ಅಧ್ಯಕ್ಷರಾಗಿ ಕಾರ್ಯಾಭಾರ ನಿರ್ವಹಿಸದಂತೆ ನೆಹರು ಓಲೇಕಾರ್ ಅವರಿಗೆ ನಿರ್ದೇಶಿಸಬೇಕು. ಅರ್ಜಿ ಇತ್ಯರ್ಥಗೊಳ್ಳುವವರೆಗೆ ಸರ್ಕಾರದ ಆದೇಶಕ್ಕೆ ತಡೆ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.