ಬೆಂಗಳೂರು : ಮುಂದಿನ ವರ್ಷ ತಮಿಳುನಾಡು ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುವ ಹಿನ್ನೆಲೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ, ಸಲ್ಲಿಸುತ್ತಿರುವ ಸಾಕಷ್ಟು ಮಂದಿ ರಾಜಕೀಯ ಪಕ್ಷಗಳತ್ತ ಮುಖ ಮಾಡುತ್ತಿದ್ದಾರೆ. ಇಂಥವರಲ್ಲಿ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದ ಸಸಿಕಾಂತ್ ಸೆಂಥಿಲ್ ಕೂಡ ಹೊರತಾಗಿಲ್ಲ.
ಆದರೆ, ಇವರ ಸೇರ್ಪಡೆ ಚುನಾವಣೆ ಉದ್ದೇಶಕ್ಕೆ ಅಲ್ಲ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ತಮಿಳುನಾಡು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಅವರೇ ಹೇಳುವಂತೆ ಸಸಿಕಾಂತ್ ಸೆಂಥಿಲ್ ರಾಷ್ಟ್ರೀಯ ಮಟ್ಟದ ಜವಾಬ್ದಾರಿ ನಿಭಾಯಿಸಲಿದ್ದಾರೆ. ಅಲ್ಲಿಗೆ ದಕ್ಷಿಣ ಭಾರತ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ದನಿಯಾಗಿ ಸೆಂಥಿಲ್ ಕಾರ್ಯನಿರ್ವಹಿಸಲಿದ್ದಾರೆ.
ಉತ್ತರ ಭಾರತದಲ್ಲಿ ಹಿಂದುತ್ವ, ಕೇಸರೀಕರಣದ ಹೆಸರಿನಲ್ಲಿ ಬೇರೂರಿರುವ ಬಿಜೆಪಿ, ಇದೀಗ ದಕ್ಷಿಣ ಭಾರತದಲ್ಲಿಯೂ ಇಂಥದ್ದೇ ಪ್ರಯತ್ನಕ್ಕೆ ಮುಂದಾಗಿದೆ. ಪ್ರಾದೇಶಿಕ ಪಕ್ಷಗಳು ಬಲವಾಗಿರುವ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತಿತರ ರಾಜ್ಯಕ್ಕೂ ಬಿಜೆಪಿ ವಿಸ್ತರಣೆಗೊಳ್ಳಲು ಸಾಕಷ್ಟು ಶ್ರಮ ಹಾಕ್ತಿದೆ. ಇದನ್ನ ತಡೆಯುವ ಅನಿವಾರ್ಯತೆ ಬರೀ ಕಾಂಗ್ರೆಸ್‌ಗಷ್ಟೇ ಅಲ್ಲ, ಇತರ ಪ್ರಾದೇಶಿಕ ಪಕ್ಷಗಳಿಗೂ ಎದುರಾಗಿದೆ.
ಈಗಾಗಲೇ ಕಾಂಗ್ರೆಸ್-ಬಿಜೆಪಿ ಸೇರಿ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ಗೆ ನೆಲೆ ಇಲ್ಲದಂತೆ ಮಾಡುವ ಯತ್ನದಲ್ಲಿವೆ. ಉಳಿದ ರಾಜ್ಯಗಳಲ್ಲಿಯೂ ಪ್ರಾದೇಶಿಕ ಪಕ್ಷಗಳು ಹಂತ ಹಂತವಾಗಿ ನೆಲೆ ಕಳೆದುಕೊಳ್ಳುವ ಆತಂಕವೂ ಇದೆ. ಈ ಸಂದರ್ಭದಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ಎದುರಾಗುತ್ತಿರುವ ಸಂದರ್ಭ ರಾಷ್ಟ್ರೀಯ ಪಕ್ಷಗಳು ತಮ್ಮ ನೆಲೆ ಭದ್ರ ಪಡಿಸಿಕೊಳ್ಳುವ ಯತ್ನದಲ್ಲಿವೆ.
ಕಾಂಗ್ರೆಸ್ ವಕ್ತಾರೆಯಾಗಿದ್ದ ನಟಿ ಖುಷ್ಬು ಅವರನ್ನು ಬಿಜೆಪಿ ಸೆಳೆದಿದೆ. ಕಾಂಗ್ರೆಸ್‌ನಲ್ಲಿರುವ ನಿರ್ವಾತವನ್ನ ತುಂಬಬಲ್ಲ ಸಮರ್ಥ ವ್ಯಕ್ತಿ ಎಸ್. ಸಸಿಕಾಂತ ಸೆಂಥಿಲ್. ನಿರ್ವಿವಾದವಾಗಿ ಇದನ್ನ ನಿಭಾಯಿಸಬಲ್ಲ ಶಕ್ತಿ ಅವರಲ್ಲಿದೆ. ಜತೆಗೆ ಬಿಜೆಪಿಯ ಅಜೆಂಡಾವನ್ನ ಎಳೆ ಎಳೆಯಾಗಿ ಬಿಚ್ಚಿಡಬಲ್ಲರು.
ಬಲಪಂಥೀಯ ವಿರೋಧಿ : ಐಎಎಸ್ ಅಧಿಕಾರಿಯಾಗಿದ್ದ ಎಸ್. ಸಸಿಕಾಂತ ಸೆಂಥಿಲ್, ಕೇಸರೀಕರಣ, ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ಸೇರಿ ಇತ್ಯಾದಿ ವಿಚಾರದಲ್ಲಿ ಸಹಮತ ಕಾಣದೇ 2019ರ ಸೆಪ್ಟೆಂಬರ್ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಹೊರ ಬಂದಿದ್ದರು. ಇದಾದ ಬಳಿಕ ಸಾಕಷ್ಟು ಕಡೆ ಅವಕಾಶ ಸಿಕ್ಕಲ್ಲೆಲ್ಲಾ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯ, ಹೊಸ ಕಾನೂನುಗಳಲ್ಲಿನ ದೌರ್ಬಲ್ಯಗಳು, ಅದರಿಂದ ಶ್ರೀಸಾಮಾನ್ಯನ ಮೇಲಾಗುವ ಸಮಸ್ಯೆಗಳು, ಸಂಕಷ್ಟಗಳೇನು ಅನ್ನೋದನ್ನ ತುಂಬಾ ಆಳವಾಗಿಯೇ ವಿವರಿಸ್ತಿದ್ದರು.
ರಾಜಕೀಯದತ್ತ ಒಲವು ಹೊಂದಿದ್ದಾರೆ ಹಾಗೂ ಕಾಂಗ್ರೆಸ್‌ನತ್ತ ಮುಖ ಮಾಡಲಿದ್ದಾರೆ ಎನ್ನುವ ಬಗ್ಗೆ ಅದಾಗಲೇ ಸುಳಿವು ಸಿಕ್ಕಿತ್ತು. ಆದರೆ, ವರ್ಷದಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯುವ ಹಿನ್ನೆಲೆ ಅವರು ಮುಂದೆ ಸ್ಪರ್ಧಿಸುವ ಉದ್ದೇಶದಿಂದ ಕೈ ಹಿಡಿಯುತ್ತಿದ್ದಾರೆ ಎನ್ನಲಾಗಿತ್ತು. ಆದರೆ, ಕಾಂಗ್ರೆಸ್ ಪಕ್ಷ ಇವರಿಗೆ ರಾಷ್ಟ್ರೀಯ ಜವಾಬ್ದಾರಿ ನೀಡಲು ಮುಂದಾಗಿದೆ. ದಕ್ಷಿಣ ಭಾರತದ ಕಾಂಗ್ರೆಸ್ ವಕ್ತಾರರನ್ನಾಗಿ ನೇಮಿಸುವ ಸಾಧ್ಯತೆ ಇದೆ.
ಸಸಿಕಾಂತ್ ಸೆಂಥಿಲ್ ಸ್ಪರ್ಧೆ ಕಷ್ಟ : 41ರ ಪ್ರಾಯದ ಎಸ್. ಸಸಿಕಾಂತ ಸೆಂಥಿಲ್ ಹುಟ್ಟಿ, ಬೆಳೆದದ್ದು ತಮಿಳುನಾಡಿನಲ್ಲಾದ್ರೂ, ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಇವರು, 2009ರ ಬ್ಯಾಚ್‌ನಲ್ಲಿ ಐಎಎಸ್ ಮುಗಿಸಿ ಸೇವೆ ಸೇರಿದ್ದಾರೆ. 2019ರಲ್ಲಿ ಹುದ್ದೆಗೆ ರಾಜೀನಾಮೆ ನೀಡುವವರೆಗೂ ಅವರು ಕರ್ನಾಟಕದಲ್ಲೇ ಸೇವೆ ಸಲ್ಲಿಸಿದ್ದು ಹೆಚ್ಚು.
ಬಳ್ಳಾರಿಯ ಉಪ ಆಯುಕ್ತರಾಗಿ 2009 ರಿಂದ 2016ರವರೆಗೆ ಸೇವೆ ಸಲ್ಲಿಸಿದ ಅವರು, ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಿಇಒ ಆಗಿ ಎರಡು ಅವಧಿ ಕಾರ್ಯನಿರ್ವಹಿಸಿದ್ದಾರೆ. ನಂತರ ಚಿತ್ರದುರ್ಗ ಹಾಗೂ ರಾಯಚೂರು ಜಿಲ್ಲೆಯ ಉಪ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ. 2016-17ರಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರಾಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. 2017ರಿಂದ 2019ರವರೆಗೆ ದಕ್ಷಿಣ ಕನ್ನಡ ಜಿಲ್ಲೆ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ ಇವರು ಇದೇ ಹುದ್ದೆಯಲ್ಲಿದ್ದಾಗ ರಾಜೀನಾಮೆ ನೀಡಿದ್ದಾರೆ.
ಇದಾದ ಬಳಿಕ ತವರಿಗೆ ತೆರಳಿದ್ದ ಇವರು, ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಬೇಸರ, ಆಕ್ರೋಶ ಹೊರ ಹಾಕುವ ಕೆಲಸ ಮಾಡಿದ್ದಾರೆ. ಬಲಪಂಥೀಯ ವಾದದ ವಿರುದ್ಧ ಸಾಕಷ್ಟು ಮಾತನಾಡುವ ಸಾಮರ್ಥ್ಯ ಹೊಂದಿರುವ ಇವರನ್ನು ಬಳಸಿಕೊಂಡು ಬಿಜೆಪಿಯನ್ನು ದಕ್ಷಿಣ ಭಾರತದಲ್ಲಿ ಕಟ್ಟಿ ಹಾಕುವ ಉದ್ದೇಶ ಕಾಂಗ್ರೆಸ್ ಪಕ್ಷ ಹೊಂದಿದೆ. ಇದಕ್ಕಾಗಿಯೇ ಅವರನ್ನು ಪಕ್ಷಕ್ಕೆ ಸೆಳೆದಿದೆ.
ನಾಳೆ ಚೆನ್ನೈನಲ್ಲಿ ತಮಿಳುನಾಡು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಇವರನ್ನು ಬರಮಾಡಿಕೊಳ್ಳುತ್ತಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಹಾಗೂ ಅಗತ್ಯ ಸಂದರ್ಭಗಳಲ್ಲಿ ಕಾಂಗ್ರೆಸ್ ಪಕ್ಷ ಇವರ ಸೇವೆಯ ಸದ್ಬಳಕೆ ಮಾಡಿಕೊಳ್ಳಲಿದೆ. ರಾಜಕೀಯವಾಗಿ ಸಾಕಷ್ಟು ಅನುಭವ ಹೊಂದಿಲ್ಲದ ಕಾರಣ ಬರುವ ವಿಧಾನಸಭೆ ಚುನಾವಣೆಯಲ್ಲಿ ಮತದಾರರ ಮುಂದೆ ಬರುವ ಸಾಧ್ಯತೆ ಬಹಳ ಕಡಿಮೆ.