ಬೆಂಗಳೂರು: ಪರಪ್ಪನ ಅಹ್ರಹಾರ ಜೈಲು ಸದ್ಯ ಹೈ- ಫೈ ವ್ಯಕ್ತಿಗಳು ಇರುವ ಕೇಂದ್ರವಾಗಿದೆ. ಹೊರಗೆ ಐಷಾರಾಮಿ ಬದುಕನ್ನ ನಡೆಸುತ್ತಿದ್ದವರಿಗೆ ಸದ್ಯ ಜೈಲಲ್ಲಿ ವಿಚಾರಣಾ ಕೈದಿಗಳಾಗಿ ಇರುವುದು ಅನಿವಾರ್ಯವಾಗಿದೆ.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಇಟ್ಟ ಪ್ರಕರಣದ ಆರೋಪಿಯಾಗಿರುವ ಮಾಜಿ ಮೇಯರ್ ಸಂಪತ್ ರಾಜ್ ಸದ್ಯ ಜಯದೇವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮತ್ತೆ ಜೈಲು ಪಾಲಾಗಿದ್ದಾರೆ. ಹಾಗೆ ಇತ್ತ ನಿನ್ನೆ ರಾತ್ರಿ ಐಎಂಎ ಪ್ರಕರಣದಲ್ಲಿ ಮನ್ಸೂರ್ ಖಾನ್ನಿಂದ ಲಂಚ ಪಡೆದಿರುವ ಮಾಜಿ ಮಿನಿಸ್ಟರ್ ರೋಷನ್ ಬೇಗ್ ಕೂಡ ಪರಪ್ಪನ ಅಗ್ರಹಾರ ಸೇರಿದ್ದಾರೆ. ಆದರೆ ಸದ್ಯ ಕೊರೊನಾ ಇರುವ ಕಾರಣ ಹೊರಗಡೆಯಿಂದ ಬರುವ ಪ್ರತಿ ವ್ಯಕ್ತಿಗಳಿಗೆ 14 ದಿನಗಳ ಕಾಲ ಕ್ವಾರಂಟೈನ್ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ. ಹೀಗಾಗಿ ಸದ್ಯ ಇಬ್ಬರನ್ನ ಪ್ರತ್ಯೇಕ ಸೆಲ್ನಲ್ಲಿ ಇರಿಸಲಾಗಿದೆ.
ಇಬ್ಬರು ಎದುರು - ಬದುರು ಬ್ಯಾರಕ್ ನಲ್ಲಿದ್ದಾರೆ. ಇಬ್ಬರು ಕೂಡ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡವರು. ಸದ್ಯ ಬೇರೆ ಬೇರೆ ಪ್ರಕರಣದಲ್ಲಿ ತಪ್ಪು ಮಾಡಿ ಜೈಲು ಕಂಬಿ ಎಣಿಸುವಂತಾಗಿದೆ. ಜೈಲಾಧಿಕಾರಿಗಳು ಇಬ್ಬರಿಗೂ ನಿಯಮವನ್ನ ಹೇರಿದ್ದಾರೆ. ಯಾವುದೇ ಕಾರಣಕ್ಕೂ ಕ್ವಾರಂಟೈನ್ ನಿಯಮವನ್ನು ಉಲ್ಲಂಘನೆ ಮಾಡಬಾರದು. 14ದಿನ ಕ್ವಾರಂಟೈನ್ ಮುಗಿಸಿದ ಬಳಿಕ ಕೊರೊನಾ ಚೆಕ್ಅಪ್ ನಡೆಸಿದ ನಂತರ ಮತ್ತೆ ಸಾಮಾನ್ಯ ಸೆಲ್ಗೆ ಹಾಕಲಾಗುವುದು ಎಂದು ಸೂಚಿಸಿದ್ದಾರೆ ಎನ್ನಲಾಗ್ತಿದೆ.