ಬೆಂಗಳೂರು: ಚಿಂದಿ ಆಯುವವರ ನಡುವೆ ಜಗಳ ಉಂಟಾಗಿ, ಕೊಲೆಯಲ್ಲಿ ಅಂತ್ಯವಾಗಿದ್ದ ಪ್ರಕರಣವನ್ನು ಬೊಮ್ಮನಹಳ್ಳಿ ಠಾಣಾ ಪೊಲೀಸರು ಭೇದಿಸಿದ್ದಾರೆ. ಪ್ರಕರಣ ಸಂಬಂಧ ದೀಪಕ್, ಹೇಮಂತ್ ಗೋಪ್, ಮಾದೇಶ್ ಎಂಬುವರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಸ್ನೇಹಿತರಿಂದಲೇ ಹತ್ಯೆ
ಸೆ.13ರಂದು ಬೊಮ್ಮನಹಳ್ಳಿಯ 1ನೇ ಕ್ರಾಸ್ನಲ್ಲಿ 20 ರೂಪಾಯಿ ವಿಚಾರಕ್ಕೆ ಚಿಂದಿ ಆಯುವವರ ನಡುವೆ ಜಗಳ ಶುರುವಾಗಿತ್ತು. ಈ ವೇಳೆ ದೀಪಕ್, ಹೇಮಂತ್ ಗೋಪ್, ಮಾದೇಶ್ ಎಂಬುವವರು ಸಂಜಯ್ ಅಲಿಯಾಸ್ ನೇಪಾಳಿ (30) ಎಂಬಾತನನ್ನು ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದರು ಎನ್ನಲಾಗಿದೆ.
ಕೇಸ್ ಬಗ್ಗೆ ಡಿಸಿಪಿ ಮಾಹಿತಿ
ಅಸ್ಸಾಂ ಮೂಲದ ಸಂಜಯ್ ಕೊಲೆಯಾಗಿದ ವ್ಯಕ್ತಿ. ಕಳೆದ ಐದಾರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಈತ ಜೀವನಕ್ಕಾಗಿ ನಗರದೆಲ್ಲೆಡೆ ಚಿಂದಿ ಆಯುತ್ತಿದ್ದ. ಇದೇ ತಿಂಗಳು ಸೆ.13 ರಂದು ಬೊಮ್ಮನಹಳ್ಳಿ ಮುಖ್ಯರಸ್ತೆಯಲ್ಲಿನ ವೈನ್ ಸ್ಟೋರ್ ಬಳಿ ರಕ್ತಸಿಕ್ತ ಸ್ಥಿತಿಯಲ್ಲಿ ಸಂಜಯ್ ಶವ ಪತ್ತೆಯಾಗಿತ್ತು. ಸ್ಥಳದಲ್ಲಿ ಕೊಲೆಯಾದ ಬಗ್ಗೆ ಯಾವುದೇ ಸುಳಿವು ದೊರೆತಿರಲಿಲ್ಲ. ಈ ಸಂಬಂಧ ನಾರಾಯಣರೆಡ್ಡಿ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಬೊಮ್ಮನಹಳ್ಳಿ ಪೊಲೀಸರು ವೈನ್ ಶಾಪ್ನ ಸಿಸಿಟಿವಿ ದೃಶ್ಯಾವಳಿಗಳನ್ನಾಧರಿಸಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ನಗರ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವನ್ ತಿಳಿಸಿದ್ದಾರೆ.
ವೈನ್ಶಾಪ್ ಕ್ಯಾಶಿಯರ್ನಿಂದ ಸಿಕ್ತು ಮಾಹಿತಿ
ಆರೋಪಿಗಳು ಸಿಗುವವರೆಗೂ ಸತ್ತವನ ಮಾಹಿತಿಯಾಗಲೀ, ಕೊಲೆ ಮಾಡಿದವರ ಮಾಹಿತಿಯಾಗಲೀ ಸಿಕ್ಕಿರಲಿಲ್ಲ. ವೈನ್ ಶಾಪ್ ಕ್ಯಾಶಿಯರ್ ಕೊಟ್ಟ ಒಂದು ಸುಳಿವಿನಿಂದಾಗಿ ಪೊಲೀಸರು ಹಂತಕರ ಹೆಡೆಮುರಿ ಕಟ್ಟಿದ್ದಾರೆ. ಘಟನೆಯ ದಿನ ಸಂಜಯ್ ಹಾಗೂ ಆರೋಪಿ ದೀಪಕ್ ಒಂದೇ ವೈನ್ ಶಾಪ್ನಲ್ಲಿ ಮದ್ಯ ಖರೀದಿಸಿದ್ದರು. ಬಳಿಕ ತಾವಿದ್ದ ಸ್ಥಳಕ್ಕೆ ತೆರಳಿದ್ದರು. ಅದೇ ಸ್ಥಳದಲ್ಲಿ ಮಾದೇಶ್ ಹಾಗೂ ಹೇಮಂತ್ ಕುಡಿದ ಮತ್ತಿನಲ್ಲಿ ಜೊತೆ ಸೇರಿದ್ದಾರೆ. ಮದ್ಯದ ನಶೆಯಲ್ಲಿ ಬಾಕಿ ಉಳಿಸಿಕೊಂಡಿದ್ದ 20 ರೂಪಾಯಿ ನೀಡುವಂತೆ ಆರೋಪಿಗಳು ಸಂಜಯ್ಗೆ ತಾಕೀತು ಮಾಡಿದ್ದಾರೆ. ಹಣ ನೀಡಲು ನಿರಾಕರಿದ್ದಾನೆ. ಇದರಿಂದ ಅಸಮಾಧಾನಗೊಂಡ ಆತನನ್ನು ತಳ್ಳಿ ಅಲ್ಲೇ ಇದ್ದ ಫೋಟೊ ಫ್ರೇಮ್ನಿಂದ ಬಲವಾಗಿ ಹೊಡೆದು ಕೊಲೆ ಮಾಡಿದ್ದರು ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
ತಪ್ಪೊಪ್ಪಿಕೊಂಡ ಆರೋಪಿ
ನಗರದ ವಿವಿಧ ಭಾಗಗಳಲ್ಲಿ ಚಿಂದಿ ಆಯುವವರನ್ನು ಕರೆತಂದು ಪೊಲೀಸರು ವಿಚಾರಣೆ ನಡೆಸಿದ್ದರು. ತನಿಖೆ ವೇಳೆ ದೀಪಕ್, ತಾನೇ ತನ್ನ ಸಹಚರರೊಂದಿಗೆ ಸೇರಿ ಸಂಜಯ್ನನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ.
ಘಟನೆ ಹಿನ್ನೆಲೆ
ಸಂಜಯ್ 15 ದಿನಗಳ ಹಿಂದೆ ಊಟಕ್ಕೆ ಹಣವಿಲ್ಲ ಎಂದು ದೀಪಕ್ ಬಳಿ 20 ರೂಪಾಯಿ ಪಡೆದಿದ್ದ. 15 ದಿನವಾದರೂ ಮರಳಿ ಹಣ ನೀಡಿಲ್ಲವೆಂಬ ವಿಚಾರವಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿತ್ತು.
ಇದನ್ನೂ ಓದಿ: 2020ರಲ್ಲಿ ರಾಜ್ಯದಲ್ಲಿ ಮಕ್ಕಳ ಮೇಲಿನ 144 ಸೈಬರ್ ಅಪರಾಧ ಪ್ರಕರಣಗಳು ದಾಖಲು: ಎನ್‌ಸಿಆರ್‌ಬಿ ವರದಿ