ಬೆಂಗಳೂರು : ಮೈಸೂರು ರೇಸ್ ಕ್ಲಬ್ ಲಿಮಿಟೆಡ್‌ಗೆ ಗುತ್ತಿಗೆ ಆಧಾರದ ಮೇಲೆ ನೀಡಿರುವ ಸರ್ಕಾರಿ ಜಮೀನು ವಾಪಸ್ ಪಡೆಯುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ನಗರದಲ್ಲಿರುವ 139 ಎಕರೆ ಸರ್ಕಾರಿ ಭೂಮಿಯನ್ನು 30 ವರ್ಷಗಳವರೆಗೆ ಮೈಸೂರು ರೇಸ್ ಕ್ಲಬ್‌ಗೆ ಅವೈಜ್ಞಾನಿಕವಾಗಿ ಗುತ್ತಿಗೆ ನೀಡಿರುವುದನ್ನು ಪ್ರಶ್ನಿಸಿ, ವಕೀಲ ಉಮಾಪತಿ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಓದಿ:ಮೈಸೂರು ರೇಸ್ ಕ್ಲಬ್ ಗುತ್ತಿಗೆ ವಿವಾದ: ಸಂಪುಟ ಸಭೆ ನಿರ್ಧಾರದ ವರದಿ ಕೇಳಿದ ಹೈಕೋರ್ಟ್
ಈ ವೇಳೆ ಅಡ್ವೋಕೇಟ್ ಜನರಲ್ ಪೀಠಕ್ಕೆ ಮಾಹಿತಿ ನೀಡಿ, ಮೈಸೂರು ರೇಸ್ ಕ್ಲಬ್ ಲಿಮಿಟೆಡ್‌ಗೆ ಗುತ್ತಿಗೆ ಆಧಾರದ ಮೇಲೆ ನೀಡಿರುವ ಭೂಮಿ ವಾಪಸ್ ಪಡೆಯುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈ ಕುರಿತಂತೆ ನಿರ್ಧಾರ ಕೈಗೊಳ್ಳಲು ಕಾಲಾವಕಾಶಬೇಕಿದೆ ಎಂದರು. ಹೇಳಿಕೆ ದಾಖಲಿಸಿಕೊಂಡ ಪೀಠ ವಿಚಾರಣೆಯನ್ನು ಏಪ್ರಿಲ್ 7ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ : ಮೈಸೂರಿನ ಕುರುಬರಹಳ್ಳಿಯ ಸರ್ವೆ ನಂ.5 ಮತ್ತು 74ರಲ್ಲಿನ 139.39 ಎಕರೆ ಸರ್ಕಾರಿ ಭೂಮಿಯನ್ನು ಕುದುರೆ ರೇಸ್ ಚಟುವಟಿಕೆಗಾಗಿ ಮೈಸೂರು ರೇಸ್ ಕ್ಲಬ್ ಲಿಮಿಟೆಡ್‌ಗೆ 1970ರಲ್ಲಿ ಲೋಕೋಪಯೋಗಿ ಇಲಾಖೆ ಗುತ್ತಿಗೆ ನೀಡಿದೆ. ಆ ಗುತ್ತಿಗೆ 2016ರಲ್ಲಿ ಮುಕ್ತಾಯವಾಗಿದೆ. ಮತ್ತೆ 2016ರಿಂದ 2046ರವರೆಗೆ ಗುತ್ತಿಗೆ ಮಂಜೂರು ಮಾಡಲಾಗಿದೆ.
ಕಂದಾಯ ಇಲಾಖೆ ಅಧೀನದಲ್ಲಿರುವ ಭೂಮಿಯನ್ನು ಅನಧಿಕೃತವಾಗಿ ಲೋಕೋಪಯೋಗಿ ಇಲಾಖೆಯ ಕಾರ್ಯಕಾರಿ ಎಂಜಿನಿಯರ್ ಕ್ಲಬ್‌ಗೆ ಅನುಕೂಲವಾಗುವ ರೀತಿ ಗುತ್ತಿಗೆ ಮಾಡಿಕೊಟ್ಟಿದ್ದಾರೆ.
ಕ್ಲಬ್‌ನ ವಾರ್ಷಿಕ ಆದಾಯದ ಶೇ.2ರಷ್ಟು ಹಣವನ್ನು ಮಾತ್ರ ಬಾಡಿಗೆ ನೀಡುವಂತೆ ಒಪ್ಪಂದ ಮಾಡಿಕೊಂಡಿರುವುದು ಸಂಪೂರ್ಣ ಅವೈಜ್ಞಾನಿಕವಾಗಿದೆ. ಆದ್ದರಿಂದ ಗುತ್ತಿಗೆ ನವೀಕರಣ ಆದೇಶ ರದ್ದುಪಡಿಸಬೇಕು ಹಾಗೂ ಈವರೆಗಿನ ನಷ್ಟವನ್ನು ವಸೂಲಿ ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.