ಬೆಂಗಳೂರು: ರಾಜ್ಯದ 15 ವಿಧಾನಸಭೆ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ರಾಜ್ಯಸಭಾ ಸದಸ್ಯರು ಪಾಲ್ಗೊಳ್ಳುವಿಕೆ ಹಾಗೂ ಪ್ರಚಾರದ ಅಗತ್ಯ ಇದೆ. ಇದರಿಂದ ತಲಾ ಮೂರು ಕ್ಷೇತ್ರಗಳಿಗೆ ಒಬ್ಬೊಬ್ಬ ರಾಜ್ಯಸಭೆಯ ಸದಸ್ಯರನ್ನು ಪ್ರಚಾರಕ್ಕೆ ನಿಯೋಜಿಸಿ ಕೆಪಿಸಿಸಿ ಆದೇಶ ಹೊರಡಿಸಿದೆ. ಎಲ್ಲಾ ಸದಸ್ಯರು ಕೂಡಲೇ ಪ್ರಚಾರದ ಕಣಕ್ಕಿಳಿಯುವಂತೆ ತಿಳಿಸಲಾಗಿದೆ.

ಕೆಪಿಸಿಸಿ ಆದೇಶದಂತೆ ಅಥಣಿ, ಕಾಗವಾಡ ಹಾಗೂ ಗೋಕಾಕ್ ಕ್ಷೇತ್ರದಲ್ಲಿ ಡಾ. ಎಲ್ ಹನುಮಂತಯ್ಯ, ಹೊಸಕೋಟೆ, ಶಿವಾಜಿನಗರ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ರಾಜೀವ್ ಗೌಡ, ಮಹಾಲಕ್ಷ್ಮಿಲೇಔಟ್, ಯಶವಂತಪುರ, ಕೆಆರ್ ಪುರದಲ್ಲಿ ಸಿಜಿ ಚಂದ್ರಶೇಖರ್ ಹಾಗೂ ವಿಜಯನಗರ, ರಾಣೆಬೆನ್ನೂರು, ಹಿರೇಕೆರೂರಿನಲ್ಲಿ ಸಯ್ಯದ್ ನಾಸಿರ್ ಹುಸೇನ್ ಅವರನ್ನು ನಿಯೋಜಿಸಿ ಪ್ರಚಾರಕ್ಕೆ ತೆರಳಲು ಸೂಚಿಸಲಾಗಿದೆ.
ಒಟ್ಟು 15 ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಗೆ ಪೈಕಿ ಮೂರು ಕ್ಷೇತ್ರ ಜೆಡಿಎಸ್ ಕಳೆದುಕೊಂಡ ಕ್ಷೇತ್ರಗಳಾಗಿದ್ದರೆ, ಉಳಿದ 12 ಕ್ಷೇತ್ರಗಳು ಕಾಂಗ್ರೆಸ್ ಕಳೆದುಕೊಂಡ ಕ್ಷೇತ್ರಗಳಾಗಿವೆ. ಈ 12 ಕ್ಷೇತ್ರಗಳನ್ನು ಮರಳಿ ಗೆಲ್ಲುವುದು ಕಾಂಗ್ರೆಸ್ಗೆ ಪ್ರತಿಷ್ಠೆಯಾಗಿದ್ದು,ಈ ನಿಟ್ಟಿನಲ್ಲಿ ನಡೆಸುತ್ತಿರುವ ಪ್ರಯತ್ನಗಳಿಗೆ ಇದೀಗ ರಾಜ್ಯಸಭೆ ಸದಸ್ಯರನ್ನು ಸೇರ್ಪಡೆ ಮಾಡಿಕೊಂಡಿದೆ.