ಬೆಂಗಳೂರು: ಹೈಕೋರ್ಟ್ ಆದೇಶ ಮೇರೆಗೆ ಲಾಕ್ಡೌನ್ ಹಿನ್ನೆಲೆಯಲ್ಲಿ ಜಪ್ತಿ ಮಾಡಿಕೊಳ್ಳಲಾಗಿದ್ದ ವಾಹನಗಳನ್ನು ಸಂಚಾರ ಪೊಲೀಸರು ನಿನ್ನೆ ಆಯಾ ವಾಹನ ಮಾಲೀಕರಿಗೆ ಒಪ್ಪಿಸಿದರು. ಆದರೆ, ಲಾಕ್ಡೌನ್ ಉಲ್ಲಂಘನೆ ಮಾಡಿದ್ದರಿಂದ ಭಾರಿ ಮೊತ್ತದ ದಂಡ ವಸೂಲಿ ಮಾಡಿಕೊಂಡೇ ವಾಹನಗಳನ್ನು ನೀಡಲಾಯಿತು.
ವಾಹನ ಮಾಲೀಕರಿಂದ ದಂಡ ಸಂಗ್ರಹಿಸಿಕೊಂಡು ರಿಲೀಸ್ ಮಾಡುತ್ತಿರುವ ಸಂಚಾರ ಪೊಲೀಸರು, ನಿನ್ನೆ ಒಂದೇ ದಿನದಲ್ಲಿ ವಾಹನ ಸವಾರರಿಂದ 14 ಲಕ್ಷದ 10 ಸಾವಿರ ರೂ. ದಂಡ ವಸೂಲಿ ಮಾಡಿದ್ದಾರೆ. ಲಾಕ್ಡೌನ್ ನಿಯಮ ಉಲ್ಲಂಘಿಸಿ ರಸ್ತೆಗಿಳಿದಿದ್ದ ಬೈಕ್, ಆಟೋ-ರಿಕ್ಷಾ ಹಾಗೂ ಕಾರು ಸೇರಿ 47 ಸಾವಿರಕ್ಕೂ ಹೆಚ್ಚು ವಾಹನಗಳನ್ನು ಸಂಚಾರ ಪೊಲೀಸರು ಜಪ್ತಿ ಮಾಡಿಕೊಂಡಿದ್ದರು.
ವಾಹನ ಸವಾರರಿಂದ ದಂಡ ಸಂಗ್ರಹಿಸಿ ಮತ್ತೆ ಲಾಕ್ಡೌನ್ ಆದೇಶ ಉಲ್ಲಂಘಿಸಿದಂತೆ ಮುಚ್ಚಳಿಕೆ ಪಡೆದು ವಾಹನ ವಾರಸುದಾರರಿಗೆ ನೀಡಬೇಕು ಎಂದ ಹೈಕೋರ್ಟ್ ಆದೇಶ ಹಿನ್ನೆಲೆ ಮೇ 1 ರಂದು ಸವಾರರಿಂದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿಕೊಂಡು ದಂಡ ವಸೂಲಿ ಮಾಡಿದ್ದಾರೆ.
ನಿನ್ನೆ ಒಂದೇ ದಿನದಲ್ಲಿ 1634 ವಾಹನಗಳಿಂದ 5429 ಕೇಸ್ ದಾಖಲಿಸಿ 14 ಲಕ್ಷದ 10 ಸಾವಿರ ರೂ. ಲಕ್ಷ ಡಂಡ ವಸೂಲಿ ಮಾಡಿರುವುದಾಗಿ ನಗರ ಸಂಚಾರ ವಿಭಾಗ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.