ಬೆಂಗಳೂರು: "ಡಿಸಿಎಂ ಹುದ್ದೆ ಸೃಷ್ಟಿ ವಿಚಾರವೆಲ್ಲಾ ಸಿನಿಮೀಯ ರೀತಿಯ ಊಹಾಪೋಹದ ಸುದ್ದಿಯಾಗಿದೆ" ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಪದಾಧಿಕಾರಿಗಳು, ಸಚಿವರು ಮತ್ತು ಶಾಸಕರುಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಡಿಸಿಎಂ ಹುದ್ದೆ ಸೃಷ್ಟಿ ವಿಚಾರವಾಗಿ ಪ್ರತಿಕ್ರಿಯಿಸಿ, "ಇದೆಲ್ಲಾ ಸಿನಿಮೀಯ ರೀತಿಯ ಊಹಾಪೋಹದ ವಿಷಯವಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಜನರ ಕಲ್ಯಾಣಕ್ಕೆ ನಾವು ಒತ್ತು ನೀಡುತ್ತೇವೆ. ಗ್ಯಾರಂಟಿ ಜಾರಿ ನಮ್ಮ ಆದ್ಯತೆಯಾಗಿದೆ. ಪ್ರತಿಯೊಂದು ತಾಲೂಕುಗಳಲ್ಲಿ, ಕ್ಷೇತ್ರಗಳಲ್ಲಿ ಆಸ್ಪತ್ರೆ, ರಸ್ತೆ, ಬಸ್ ನಿಲ್ದಾಣಗಳು ಹಾಗೂ ಮೂಲಸೌಕರ್ಯಗಳನ್ನು ಕೊಡುವುದು ನಮ್ಮ ಆದ್ಯತೆಯಾಗಿದೆ" ಎಂದು ತಿಳಿಸಿದರು.
ರಾಜ್ಯಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ರಚನೆ: "ಪದಾಧಿಕಾರಿಗಳು ಹಾಗೂ ಸಚಿವರು, ಶಾಕರ ಜೊತೆಗಿನ ಸಭೆ ಫಲಪ್ರದವಾಗಿದೆ. ಲೋಕಸಭೆ ಚುನಾವಣೆಗೆ ಕ್ರಿಯಾ ಯೋಜನೆ ಬಗ್ಗೆ ಚರ್ಚೆ ನಡೆದಿದೆ. ತಳ ಮಟ್ಟದಲ್ಲಿ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸುತ್ತೇವೆ. ಕಾಂಗ್ರೆಸ್ ಗ್ಯಾರಂಟಿಯನ್ನು ತಳಮಟ್ಟದಲ್ಲಿ ಜನರಿಗೆ ತಲುಪಿಸಲು ಸಿಎಂ ಸಿದ್ದರಾಮಯ್ಯ ಅವರು ಸಮಗ್ರ ರೂಪುರೇಷೆಯನ್ನು ಘೋಷಣೆ ಮಾಡಿದ್ದಾರೆ. ಎಲ್ಲರೂ ಅದಕ್ಕೆ ಅನುಮೋದನೆ ನೀಡಿದ್ದಾರೆ. ರಾಜ್ಯಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ರಚನೆಯ ಘೋಷಣೆ ಮಾಡಿದ್ದಾರೆ" ಎಂದರು.
"ಕ್ಷೇತ್ರ ಹಾಗೂ ಜಿಲ್ಲಾ ಮಟ್ಟದಲ್ಲಿ ಈ ಸಮಿತಿ ಕಾರ್ಯನಿರ್ವಹಿಸಲಿದೆ. ಸಮಿತಿ ಪಾರದರ್ಶಕವಾಗಿ ಕೆಲಸ ಮಾಡಲಿದೆ. ಏನಾದರೂ ಸಮಸ್ಯೆ ಇದ್ದರೆ ಅದನ್ನು ಬಗೆಹರಿಸಲು ಈ ಸಮಿತಿ ಕ್ರಮ ವಹಿಸಲಿದೆ. ಬೇರೆ ಬೇರೆ ಇಲಾಖಾವಾರು ಸಮಿತಿ ರಚನೆಗೂ ನಿರ್ಧಾರ ಮಾಡಲಾಗಿದೆ. ಉದಾಹರಣೆಗೆ ಆಸ್ಪತ್ರೆ ಸಮಿತಿ ರಚಿಸುವ ಮೂಲಕ ಆಸ್ಪತ್ರೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆ ಹರಿಸಲಾಗುತ್ತದೆ. ಜನರ ಸರ್ಕಾರ ಮಾಡುವ ನಿಟ್ಟಿನಲ್ಲಿ ಈ ಸಮಿತಿ ಕಾರ್ಯನಿರ್ವಹಿಸಲಿದೆ. ಇನ್ನು ಲೋಕಸಭೆ ಚುನಾವಣೆ ಸಂಬಂಧ ಸುಮಾರು 10 ರಿಂದ 11 ಕ್ರಿಯಾ ಯೋಜನೆ ರೂಪಿಸಲು ಚರ್ಚೆ ನಡೆದಿದೆ" ಎಂದು ಹೇಳಿದರು.
ಡಿಸಿಎಂ ಹುದ್ದೆ ಬೇಡಾ ಅಂತಾ ಯಾರಾದ್ರೂ ಸಚಿವರು ಹೇಳಿದ್ದಾರಾ - ರಾಜಣ್ಣ: ಮತ್ತೊಂದೆಡೆ, ಉಪ ಮುಖ್ಯಮಂತ್ರಿ ಹುದ್ದೆಗಳು ಬೇಡ ಅಂತಾ ಯಾರಾದರೂ ಸಚಿವರು ಹೇಳಿದ್ದಾರಾ ಎಂದು ಸಹಕಾರ ಖಾತೆ ಸಚಿವ ಕೆ ಎನ್ ರಾಜಣ್ಣ ಮತ್ತೆ ಡಿಸಿಎಂ ಹುದ್ದೆಯ ಆಕಾಂಕ್ಷೆ ಕುರಿತು ಪುನರುಚ್ಚರಿಸಿದ್ದಾರೆ. ಇಂದು ಕೆಪಿಸಿಸಿ ಕಚೇರಿ ಬಳಿ ಮಾತನಾಡಿದ ಅವರು, ಮೂರು ಡಿಸಿಎಂ ಹುದ್ದೆ ವಿಚಾರವಾಗಿ ಪ್ರತಿಕ್ರಿಯಿಸಿ, ಎಲ್ಲರೂ ಮಾಡಬೇಕು ಅಂತಾನೇ ಹೇಳ್ತಿರೋದು. ಮೌನವಾಗಿದ್ದಾರೆ ಎಂದರೆ ಅವರೆಲ್ಲರಿಗೆ ಸಮ್ಮತಿ ಇದೆ ಅಂತ ಅರ್ಥ. ಯಾರೂ ಆಗಬಾರದು ಅಂತ ಹೇಳಿಲ್ಲ. ನಮ್ಮ ಬೇಡಿಕೆ ನಿರಂತರವಾಗಿ ಇರುತ್ತೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಬೇಡಿಕೆ ಬಗ್ಗೆ ಸುರ್ಜೇವಾಲರನ್ನೇ ಕೇಳಿ: ಡಿಸಿಎಂ ಡಿಕೆಶಿ