ಬೆಂಗಳೂರು : 40% ಕಮಿಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆ ಅಧಿಕಾರಿಗಳ ತನಿಖೆ ಹಿಂದೆ ಷಡ್ಯಂತ್ರವಿದೆ. ಗೃಹ ಇಲಾಖೆ ಅಧಿಕಾರಿಗಳ ನಡೆ ನೋಡಿದರೆ ದೂರು ನೀಡಿರುವ ಗುತ್ತಿಗೆದಾರರ ಸಂಘವನ್ನು ಬೆದರಿಸುವ ಹಾಗೂ ಭ್ರಷ್ಟ ಸಚಿವರನ್ನು ರಕ್ಷಣೆ ಮಾಡುವ ಪ್ರಯತ್ನ ನಡೆಯುತ್ತಿವೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಆರೋಪಿಸಿದರು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಕಮಿಷನ್ ಕುರಿತು ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ಪತ್ರ ಬರೆದು ಸುಮಾರು ಒಂದು ವರ್ಷ ಪೂರ್ಣಗೊಂಡಿದೆ. ಈಗ ಅದರ ವಿಚಾರಣೆಗೆ ಮುಂದಾಗಿದ್ದಾರೆ. ಪ್ರಕರಣದ ವಿಚಾರಣೆ ಮಾಡಲು ಬಂದ ಅಧಿಕಾರಿಗಳು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಿಗೆ ದಾಖಲೆ ಸಲ್ಲಿಸುವಂತೆ ಕೇವಲ ಮೌಖಿಕ ರೂಪದಲ್ಲಿ ಸೂಚನೆ ನೀಡಿರುವುದೇಕೆ? ಲಿಖಿತ ರೂಪದಲ್ಲಿ ನೋಟಿಸ್ ಅನ್ನು ನೀಡಿಲ್ಲ ಏಕೆ?.
ಕೆಂಪಣ್ಣನವರು ದೂರು ನೀಡಿದ್ದು ಪ್ರಧಾನಿ ಕಾರ್ಯಾಲಯಕ್ಕೆ. ಆದರೆ, ಗೃಹ ಇಲಾಖೆ ತನಿಖೆಗೆ ಮುಂದಾಗಿದೆ. ಪ್ರಧಾನಿ ಕಾರ್ಯಾಲಯದಿಂದ ತನಿಖೆ ನಡೆಸುವಂತೆ ಗೃಹ ಸಚಿವಾಲಯಕ್ಕೆ ಸೂಚನೆ ರವಾನೆಯಾಗಿದೆಯೇ? ಈ ಬಗ್ಗೆ ಪ್ರಧಾನಿ ಕಾರ್ಯಾಲಯವಾಗಲಿ, ಗೃಹ ಇಲಾಖೆಯಾಗಲಿ ಯಾಕೆ ಸ್ಪಷ್ಟನೆ ನೀಡಿಲ್ಲ? ಎಂದು ಪ್ರಶ್ನಿಸಿದರು.
ಪ್ರಧಾನಿ ರಾಜ್ಯ ಪ್ರವಾಸ ಕೈಗೊಂಡಿದ್ದರು. ಬೆಂಗಳೂರಿಗೆ ಅವರ ಭೇಟಿ ಹಿನ್ನೆಲೆ ನಗರ ಶೃಂಗಾರಕ್ಕೆ 24 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ರಾಜ್ಯ ಸರ್ಕಾರವೇ ಮಾಹಿತಿ ನೀಡಿದೆ. ಒಬ್ಬ ಗುತ್ತಿಗೆದಾರರಿಗೆ 11.5 ಕೋಟಿ ಪಾವತಿಸಿ ಕಳಪೆ ಕಾಮಗಾರಿ ಮಾಡಿಸಿದ್ದಾರೆ. ಈ ವಿಚಾರವಾಗಿ ಪ್ರಧಾನಿ ಕಾರ್ಯಾಲಯ ಸ್ಪಷ್ಟನೆ ಕೇಳಿದ ನಂತರ ಅವರಿಗೆ 3 ಲಕ್ಷ ದಂಡವನ್ನು ವಿಧಿಸಿ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ.
ಇದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ? 40% ಕಮಿಷನ್ ಆರೋಪಕ್ಕೆ ಪೂರಕವಾಗಿ ಈ ಕಳಪೆ ಕಾಮಗಾರಿ ನಡೆದಿದೆ. ಗುತ್ತಿಗೆದಾರರ ಸಂಘದ ದೂರಿನ ನಂತರ ಈ ಸಂಘ ಹಾಗೂ ಅದರ ಪದಾಧಿಕಾರಿಗಳನ್ನು ನಾಶ ಮಾಡುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಗುತ್ತಿಗೆದಾರರಿಗೆ ಬಿಲ್ ತಡೆಹಿಡಿದು ಪರೋಕ್ಷವಾಗಿ ಗುತ್ತಿಗೆದಾರರ ಸಂಘವನ್ನು ಹೆದರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ: ಕಲಬುರಗಿ ಪಾಲಿಕೆ ಮಾಜಿ ಆಯುಕ್ತರ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್
ಮೆಟ್ರೋ ರೈಲುಗಳಲ್ಲಿ ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣಕ್ಕೆ ಪ್ರಯಾಣ ಮಾಡುವ ಅವಧಿಯಲ್ಲಿ ಸಾರ್ವಕರ್ ಅವರ ವಿಚಾರದ ಬಗ್ಗೆ ಜಾಹೀರಾತು ನೀಡಲಾಗುತ್ತಿದೆ. ಈ ಹಿಂದೆ ಮೆಟ್ರೋದವರು ನಾಮಫಲಕದಲ್ಲಿ ಹಿಂದಿ ಹೇರಿಕೆ ಮಾಡಲು ಮುಂದಾದಾಗ ಕನ್ನಡಿಗರು ಹೋರಾಟದ ನಂತರ ಕನ್ನಡ ಅಳವಡಿಸಿದ್ದರು. ಈಗ ಮತ್ತೆ ಅದೇ ರೀತಿಯ ಸಂಘರ್ಷಕ್ಕೆ ಅವಕಾಶ ಮಾಡಿಕೊಡಬಾರದು.
ಗಾಂಧೀಜಿ, ನೆಹರು, ಅಂಬೇಡ್ಕರ್, ಬಸವಣ್ಣನವರ ವಿಚಾರವನ್ನು ತಿಳಿಸದೇ ಸಾರ್ವಕರ್ ಅವರ ಕುರಿತು ಜಾಹೀರಾತು ನೀಡುತ್ತಿರುವುದು ಸರಿಯಲ್ಲ. ಈ ಜಾಹೀರಾತು ನೀಡಿದವರು ಯಾರು ಎಂದು ನಮ್ಮ ಗಮನಕ್ಕೆ ಬಂದಿಲ್ಲ. ಕೂಡಲೇ ಮೆಟ್ರೋ ಅಧಿಕಾರಿಗಳು ಈ ಜಾಹೀರಾತನ್ನು ತೆಗೆಯಬೇಕು ಎಂದು ಕಾಂಗ್ರೆಸ್ ಪಕ್ಷದ ಪರವಾಗಿ ಆಗ್ರಹಿಸುತ್ತೇನೆ ಎಂದರು.