ಬೆಂಗಳೂರು: ರಾಹುಲ್ ಗಾಂಧಿ ಅವರ ಸಂಸದ ಸ್ಥಾನದ ಅನರ್ಹತೆ ನ್ಯಾಯಾಲಯದ ಕ್ರಮವೇ ಹೊರತು, ಬಿಜೆಪಿ ಕ್ರಮವಲ್ಲ, ಈ ದೇಶದ ಜನಸಾಮಾನ್ಯರಿಗೆ ಅನ್ವಯವಾಗುವ ಕಾನೂನು ರಾಹುಲ್ ಗಾಂಧಿಗೂ ಅನ್ವಯವಾಗುತ್ತದೆ. ವಿನಃ ವಿಶೇಷ ವಿನಾಯಿತಿ ಇಲ್ಲ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ.
ಹೊಸಕೆರೆಹಳ್ಳಿಯಲ್ಲಿರುವ ಪಿ.ಇ. ಎಸ್ ಕಾಲೇಜಿನಲ್ಲಿ ಯುವ ಮತದಾರರು, ಕಾಲೇಜು ವಿದ್ಯಾರ್ಥಿಗಳೊಂದಿಗೆ, ಬಿಜೆಪಿ ಯುವ ಮೋರ್ಚಾ ವತಿಯಿಂದ ಆಯೋಜನೆಗೊಂಡಿದ್ದ ಯುವ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಬ್ಬ ವ್ಯಕ್ತಿಯ ವೈಯುಕ್ತಿಕ ನಿಂದನೆಯಾಗಿದ್ದರೆ ಕೋರ್ಟ್ ಕ್ಷಮಿಸುವ ಪ್ರಶ್ನೆ ಉದ್ಭವಿಸಬಹುದು. ಆದರೆ, ಹಿಂದುಳಿದ ಒಂದು ಇಡೀ ಸಮುದಾಯಕ್ಕೆ ಮಾಡುವ ಅವಮಾನ ಹಾಗೂ ಕಾನೂನಿನ ಮುಂದೆ ಕ್ಷಮೆ ಕೇಳುವ ಔದಾರ್ಯತೆ ಇಲ್ಲದ, ಈ ನೆಲದ ಸಭ್ಯತೆ, ಸಾಂಸ್ಕೃತಿಕ ಅಸ್ಮಿತೆಯನ್ನು ಗೌರವಿಸದ ವ್ಯಕ್ತಿಗೆ ಸಾಕ್ಷಿ, ಆಧಾರಗಳ ಮೇಲೆ ಶಿಕ್ಷೆ ವಿಧಿಸಿದ್ದು ನ್ಯಾಯಾಲಯವೇ ಹೊರತು ಮೋದಿ ಸರ್ಕಾರ ಅಲ್ಲ. ಕಾನೂನಿನ ಮುಂದೆ ಎಲ್ಲರೂ ಸರಿ ಸಮಾನರು ಎಂಬುದನ್ನು ಇರಾನಿ ಪುನರುಚ್ಚರಿಸಿದರು.
ಗಾಂಧಿ ಕುಟುಂಬಕ್ಕೆ ಒಂದು ನ್ಯಾಯ, ಇಡೀ ದೇಶಕ್ಕೆ ಇನ್ನೊಂದು ನ್ಯಾಯ ವ್ಯವಸ್ಥೆ ಈ ದೇಶದಲ್ಲಿ ಇಲ್ಲ, ಕೇವಲ ರಾಹುಲ್ ಗಾಂಧಿ ಅನ್ನೋ ಕಾರಣಕ್ಕೆ ಸಂಸದೀಯ ಮೌಲ್ಯಗಳನ್ನು ಧಿಕ್ಕರಿಸಿ, ವಿಶೇಷ ವಿನಾಯಿತಿ ನೀಡುವ ಪರಿಪಾಠ ದೇಶದ ನ್ಯಾಯ ವ್ಯವಸ್ಥೆಯಲ್ಲಿ ಇಲ್ಲ ಎಂಬ ಪಾಠವನ್ನು ಗಾಂಧಿ ಕುಟುಂಬಕ್ಕೆ ನ್ಯಾಯಾಲಯ ಅರಿವು ಮೂಡಿಸಿದ್ದು ಶ್ಲಾಘನೀಯ ಕಾರ್ಯವಾಗಿದೆ.
ರಾಹುಲ್ ಗಾಂಧಿ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸರಿ ಇಲ್ಲ ಎಂದು ಸಿಕ್ಕ ಪ್ರತಿಯೊಂದು ವೇದಿಕೆಯಲ್ಲಿ ತಿಳಿಸುತ್ತಾರೆ, ಆದರೆ, ಅವರ ಯಾವುದಾದರೂ ಕಾರ್ಯಕ್ರಮಕ್ಕೆ / ಸಂವಾದಕ್ಕೆ ಇದುವರೆಗೆ ಮೋದಿ ಸರ್ಕಾರ ತಡೆಯೊಡ್ಡಿದೆಯೇ? ವಿದೇಶದ ನೆಲದಲ್ಲಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ಅವಮಾನಕರ ಮಾತಾಡುವುದು ಎಷ್ಟೊಂದು ಸರಿ ? ತನ್ನ ಸ್ವಂತ ದೇಶ, ಜನತೆಯ ಕುರಿತೇ ಕೊಂಕು ಮಾತನಾಡುವ ರಾಹುಲ್ ಗಾಂಧಿ, 2024ರಲ್ಲಿಯೂ ನರೇಂದ್ರ ಮೋದಿ ಅವರ ಸರಿ ಸಮನಾಗಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಸರ್ಕಾರ ಕೈಗೊಂಡ ಕ್ರಮಗಳು, ಲಿಂಗ ಸಮಾನತೆ ಹಾಗೂ ಇತರ ವಿಷಯಗಳ ಮೇಲೆ ಕಾಲೇಜು ವಿದ್ಯಾರ್ಥಿಗಳ ಪ್ರಶ್ನೆಗೆ ಸಂವಾದದಲ್ಲಿ ಸ್ಮೃತಿ ಇರಾನಿ ಉತ್ತರಿಸುತ್ತ, ಮಹಿಳಾ ಸುರಕ್ಷತೆಗೆಂದು ಮೀಸಲಾಗಿದ್ದ ನಿರ್ಭಯಾ ನಿಧಿಯಲ್ಲಿನ ಮೊತ್ತವನ್ನು ಕಾಂಗ್ರೆಸ್ ಸರ್ಕಾರ ಮೊದಲ ಎರಡು ವರ್ಷಗಳ ಕಾಲ ಉಪಯೋಗಿಸಿಯೇ ಇರಲಿಲ್ಲ. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ 9,000 ಕೋಟಿ ರೂ. ಗಳನ್ನು ಇಡೀ ದೇಶಾದ್ಯಂತ ವಿನಿಯೋಗಿಸಿದ್ದು ವಿಶೇಷ ಎಂದು ಹೇಳಿದರು.
ಕಾಲೇಜು ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ವಿಷಯಗಳ ಪ್ರತಿಯೊಂದು ನಿರ್ಧಾರದ ಹಿಂದೆ ರಾಜಕೀಯ ಕಾರಣ ಇದ್ದೇ ಇರುತ್ತದೆ. ನಮ್ಮ ಒಂದು ಮತ ಈ ಎಲ್ಲ ಪ್ರಕ್ರಿಯೆಗಳಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಪೂರಕವಾಗುತ್ತದೆ. ರಾಜಕಾರಣದ ನೀತಿ ನಿಯಮಾವಳಿಗಳನ್ನು ನಿರ್ಧರಿಸಲು, ರೂಪಿಸಲು ನಮ್ಮ ಒಂದು ಮತ ಅತ್ಯಂತ ನಿರ್ಣಾಯಕ. ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆಗೆ ತೆರಳುತ್ತಿರುವ ಈ ಸಂದರ್ಭದಲ್ಲಿ ರಾಜ್ಯ, ದೇಶದ ಹಿತಕ್ಕಾಗಿ ಕಾರ್ಯ ನಿರ್ವಹಿಸುವ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದ ಅವಧಿಯಲ್ಲಿ ಆಗಿರುವ ಪ್ರಗತಿ, ಸಾಧನೆಗಳ ಕುರಿತು ಸಂಸದ ಸೂರ್ಯ ವಿವರಿಸಿದರು.
ಸೆಲ್ಫಿ ವಿತ್ ಸ್ಮೃತಿ: ಇನ್ನು ಸಂವಾದ ಕಾರ್ಯಕ್ರಮದ ನಂತರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಜೊತೆ ವಿದ್ಯಾರ್ಥಿನಿಯರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು, ವಿದ್ಯಾರ್ಥಿನಿಯರ ಜೊತೆ ಮುಕ್ತವಾಗಿ ಕೆಲ ಸಮಯ ಕಳೆದ ಸ್ಮೃತಿ ಇರಾನಿ ಎಲ್ಲ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು.
ಇದನ್ನೂ ಓದಿ: ಸರ್ಕಾರಿ ಬಂಗಲೆ ಖಾಲಿ ಮಾಡಲು ಅನರ್ಹ ಸಂಸದ ರಾಹುಲ್ ಗಾಂಧಿಗೆ ನೋಟಿಸ್ ಜಾರಿ