ಬೆಂಗಳೂರು: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ 2016 ಹಾಗೂ 2017 ನೇ ಸಾಲಿನಲ್ಲಿ ನಡೆದಿದ್ದ ಅಧಿವೇಶನದ ಸಿದ್ಧತೆ ಹೆಸರಿನಲ್ಲಿ ಅವ್ಯವಹಾರ ನಡೆಸಿದ್ದಾರೆಂದು ಅಮಾನತು ಶಿಕ್ಷೆಗೆ ಗುರಿಯಾಗಿದ್ದ ಅಂದಿನ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಅವರ ಮೇಲಿನ ಆರೋಪಗಳು ಸಾಬೀತಾಗಿದ್ದು 3ನೇ ದರ್ಜೆ ಹುದ್ದೆಗೆ (ಅಧೀನ ಕಾರ್ಯದರ್ಶಿ) ಇಳಿಸಲಾಗಿದೆ.
ಇನ್ನು ಮುಂದೆ ಅತಿ ಕಿರಿಯ ಅಧೀನ ಕಾರ್ಯದರ್ಶಿಯಾಗಿ ಮೂರ್ತಿ ಅವರು ಸೇವೆಗೆ ಹಾಜರಾಗಬಹುದು. ಕಳೆದ ಮೂರುವರೆ ವರ್ಷದಿಂದ ಅಮಾನತಿನಲ್ಲಿದ್ದ ಅವಧಿಯನ್ನು ಅಮಾನತು ಎಂದೇ ಪರಿಗಣಿಸಬೇಕು. ಅಮಾನತು ಅವಧಿಯನ್ನು ಸೇವಾ ಹಿರಿತನ ಸೇರಿದಂತೆ ಯಾವುದಕ್ಕೂ ಪರಿಗಣಿಸಬಾರದು ಎಂದು ವಿಧಾನಸಭೆ ಶಿಸ್ತು ಪ್ರಾಧಿಕಾರ ಆದೇಶ ಹೊರಡಿಸಿದೆ.
![ವಿಧಾನಸಭೆ ಕಾರ್ಯದರ್ಶಿಯಾಗಿದ್ದ ಮೂರ್ತಿ ಮೇಲಿನ ಆರೋಪ ಸಾಬೀತು: ಹಿಂಬಡ್ತಿ ಶಿಕ್ಷೆ](https://etvbharatimages.akamaized.net/etvbharat/prod-images/kn-bng-06-order-of-the-ministry-script-7208083_21042022220303_2104f_1650558783_27.jpg)
ಬೆಳಗಾವಿಯಲ್ಲಿ ನಡೆದಿದ್ದ ಅಧಿವೇಶನ ಸಿದ್ಧತೆ ವೇಳೆ ನಿಯಮಬಾಹಿರವಾಗಿ ಕಾಮಗಾರಿಗಳಿಗೆ ಅಂಗೀಕಾರ ನೀಡಿ ಬಿಲ್‌ಗಳನ್ನು ಮಾಡಿರುವುದು. ಒಂದೇ ಕಾಮಗಾರಿಗೆ ಎರಡು ಬಿಲ್ ಮಾಡಿರುವುದು ಸೇರಿದಂತೆ ಹಲವು ಆರೋಪಗಳು ಮೂರ್ತಿ ಅವರ ಮೇಲೆ ಇತ್ತು. ಈ ಹಿನ್ನೆಲೆ ಅಂದಿನ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ತನಿಖೆಗೆ ಆದೇಶಿಸಿದ್ದರು. ತನಿಖೆಯಲ್ಲಿ ಅವ್ಯವಹಾರ ಕಂಡು ಬಂದು ಮೂರ್ತಿ ಅವರನ್ನು ಅಮಾನತು ಮಾಡಿ ಕ್ರಮಕ್ಕೆ ಶಿಸ್ತು ಪ್ರಾಧಿಕಾರಕ್ಕೆ ವಹಿಸಲಾಗಿತ್ತು.
ಇದೀಗ ಮುಖ್ಯಮಂತ್ರಿ, ವಿಧಾನಸಭೆ ಸ್ಪೀಕರ್ ಹಾಗೂ ಕಾನೂನು, ಸಂಸದೀಯ ಸಚಿವರನ್ನು ಒಳಗೊಂಡ ಶಿಸ್ತು ಪ್ರಾಧಿಕಾರದ ತೀರ್ಮಾನದಂತೆ ಎಸ್. ಮೂರ್ತಿ ಅವರನ್ನು ಅಧೀನ ಕಾರ್ಯದರ್ಶಿಯಾಗಿ ಕೆಳಗಿಳಿಸಿ ವಿಧಾನಸಭೆ ಸಚಿವಾಲಯ ಆದೇಶ ಹೊರಡಿಸಿದೆ.