ಬೆಂಗಳೂರು: 14 ದಿನಗಳ ಕಾಲ ಗೃಹಬಂಧನಕ್ಕೆ ಒಳಗಾಗಿದ್ದ ಕನ್ನಡತಿ ಸೇರಿದಂತೆ ನಾಲ್ವರು ಮಹಿಳೆಯರನ್ನು ಕತಾರ್ನ ಭಾರತೀಯ ರಾಯಭಾರ ಕಚೇರಿ ಹಾಗೂ ಬೆಂಗಳೂರಿನಲ್ಲಿರುವ ವಲಸಿಗರ ರಕ್ಷಣಾ ಕೇಂದ್ರದ ಅಧಿಕಾರಿಗಳು ರಕ್ಷಣೆ ಮಾಡಿ ದೇಶಕ್ಕೆ ಕರೆತಂದಿದ್ದಾರೆ.
ಹಾಸನದ ಹೊಳೆನರಸೀಪುರದ ಮಂಜುಳಾ, (ಹೆಸರು ಬದಲಾಯಿಸಲಾಗಿದೆ) ಹೈದರಾಬಾದ್ ಮೂಲದ ಇಬ್ಬರು ಹಾಗೂ ಕೇರಳದ ಓರ್ವ ಮಹಿಳೆಯರನ್ನು ಕಾಪಾಡಿ ತಾಯ್ನಾಡಿಗೆ ಆಧಿಕಾರಿಗಳು ಕರೆ ತಂದಿದ್ದಾರೆ.
ಕಂಪ್ಯೂಟರ್ ಡಿಪ್ಲೋಮಾ ಕೋರ್ಸ್ ಮಾಡಿಕೊಂಡಿದ್ದ 26 ವರ್ಷದ ಮಂಜುಳಾ ಕೆಲಸದ ಹುಡುಕಾಟ ನಡೆಸುತ್ತಿದ್ದು, ಇದಕ್ಕಾಗಿ ಚಿಕ್ಕಮಗಳೂರಿನ ಜಾಬ್ ಕನ್ಸಲ್ಟೆನ್ಸಿವೊಂದರಲ್ಲಿ ರೆಸ್ಯೂಮ್ ಕೊಟ್ಟಿದ್ದರು. ಇದರ ಆಧಾರದ ಮೇಲೆ ಮಂಜುಳಾರನ್ನು ಸಂಪರ್ಕಿಸಿದ ಏಜೆನ್ಸಿ ಸಿಬ್ಬಂದಿಯೊಬ್ಬ ಕತಾರ್ನಲ್ಲಿ ನರ್ಸ್ ಕೆಲಸ ಕೊಡಿಸುತ್ತೇನೆಂದು ಭರವಸೆ ಕೊಟ್ಟಿದ್ದನಂತೆ. ಆದರೆ ಅಲ್ಲಿಗೆ ಹೋಗಬೇಕಾದರೆ ಪ್ರವೇಶ ಶುಲ್ಕ, ವಿಮಾನ ದರ ಸೇರಿ ಒಟ್ಟು 2 ಲಕ್ಷ ರೂ. ಕೊಡಬೇಕು ಎಂದು ಡಿಮ್ಯಾಂಡ್ ಇಟ್ಟಿದ್ದನಂತೆ. 2 ಲಕ್ಷ ರೂ. ಹಣ ನೀಡಲು ಸಾಧ್ಯವಿಲ್ಲ ಎಂದಿದಕ್ಕೆ ಟೂರಿಸ್ಟ್ ವೀಸಾ ಮಾಡಿಸಿಕೊಡುತ್ತೇನೆಂದು ಸಮಜಾಯಿಷಿ ಕೂಡಾ ನೀಡಿದ್ದ. ಕತಾರ್ ಏರ್ಪೋರ್ಟ್ ಅಧಿಕಾರಿಗಳು ಕೇಳಿದರೆ ಪ್ರವಾಸಿ ವೀಸಾದಡಿ ಬಂದಿದ್ದೇವೆಂದು ಹೇಳಿ ಎಂದು ಜ. 12ರಂದು ಯುವತಿಯನ್ನು ರಿರ್ಟನ್ ಟಿಕೆಟ್ ಸಮೇತ ಕತಾರ್ ವಿಮಾನ ಹತ್ತಿಸಿದ್ದ.
ಕತಾರ್ಗೆ ಬಂದಿಳಿಯತ್ತಿದ್ದಂತೆ ಮಂಜುಳಾರನ್ನು ರಿಸೀವ್ ಮಾಡಿಕೊಂಡ ಅಲ್ಲಿನ ಏಜೆನ್ಸಿ ಸಿಬ್ಬಂದಿ ಪಾಸ್ಪೋರ್ಟ್ ಹಾಗೂ ಪ್ರವಾಸಿ ವೀಸಾ ಪಡೆದುಕೊಂಡಿದ್ದಾನೆ. ಬಳಿಕ ರಿರ್ಟನ್ ಟಿಕೆಟ್ ಕ್ಯಾನ್ಸಲ್ ಮಾಡಿದ್ದಾರೆ. ನಂತರ ಯುವತಿಯನ್ನು ಮನೆಯೊಂದಕ್ಕೆ ಕರೆದುಕೊಂಡು ಹೋಗಿ ನರ್ಸ್ ಕೆಲಸ ಬದಲು ಆಯಾ ಹಾಗೂ ಅಡುಗೆ ಕೆಲಸ ಮಾಡುವಂತೆ ಒತ್ತಾಯಿಸಿದ್ದಾನೆ. ದಿನದ 16 ಗಂಟೆ ಲೆಕ್ಕದಲ್ಲಿ ಕೆಲಸ ಮಾಡಿಸಿದ್ದಾರೆ. ಸರಿಯಾಗಿ ಊಟ ನೀಡದೆ ಶೋಷಣೆ ಕೂಡಾ ನೀಡಿದ್ದಾರಂತೆ.
ಇದರಿಂದ ಮನನೊಂದ ಮಂಜುಳಾ ಕೆಲ ದಿನಗಳ ಬಳಿಕ ಸಿಬ್ಬಂದಿಗೆ ತನ್ನನ್ನು ತಾಯ್ನಾಡಿಗೆ ಕಳುಹಿಸುವಂತೆ ಮನವಿ ಮಾಡಿದ್ದು, ಇದಕ್ಕೆ ಸ್ಪಂದನೆ ಸಿಕ್ಕಿರಲಿಲ್ಲ. ಹೆಚ್ಚು ಹಠ ಮಾಡಿದ ಬೆನ್ನಲ್ಲೇ ಆಕೆಯನ್ನು ಆ ಮನೆಯಿಂದ ಕರೆದುಕೊಂಡು ಹೋಗಿ ಗೋದಾಮೊಂದರಲ್ಲಿ 14 ದಿನಗಳ ಕಾಲ ಬಂಧನದಲ್ಲಿಸಿದ್ದರಂತೆ. ಈಕೆಯ ಜೊತೆ ಇದೇ ರೀತಿ ಹೈದರಾಬಾದ್ ಹಾಗೂ ಕೇರಳ ಯುವತಿಯರನ್ನೂ ಸಹ ಬಂಧಿಸಿ ಇಟ್ಟಿದ್ದರು. ಇವರಿಗೆ ಒಂದು ಕಪ್ ಅಕ್ಕಿ, ಒಂದು ಈರುಳ್ಳಿ, ಒಂದು ಆಲೂಗಡ್ಡೆ, ಟೊಮೊಟೊ ಮಾತ್ರ ನೀಡಿ ಆಹಾರ ಸಿದ್ಧಪಡಿಸಿ ಎಂದು ಸೂಚಿಸಿದ್ದರಂತೆ.
ಕಣ್ಗಾವಲಿಗಾಗಿ ಇಬ್ಬರನ್ನು ನಿಯೋಜನೆ ಮಾಡಿಕೊಂಡಿದ್ದರು. ಬಳಿಕ ನಾಲ್ವರು ಪರಸ್ಪರ ಮಾತನಾಡಿಕೊಂಡು ಯೋಜನೆ ರೂಪಿಸಿಕೊಂಡು ಹೇಗೋ ತಪ್ಪಿಸಿಕೊಂಡು ಸಮೀಪದ ಪೊಲೀಸ್ ಠಾಣೆಗೆ ತೆರಳಿ ನಡೆದಿದ್ದನ್ನೆಲ್ಲಾ ವಿವರಿಸಿದ್ದಾರೆ. ಪೊಲೀಸರ ಸಹಾಯದಿಂದ ಕುಟುಂಬಸ್ಥರಿಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಕತಾರ್ ಪೊಲೀಸರು ಅಲ್ಲಿನ ಭಾರತೀಯ ರಾಯಭಾರ ಕಚೇರಿಗೆ ಸಂಪರ್ಕಿಸಿದ್ದಾರೆ. ಇಲ್ಲಿ ಮಂಜುಳ ಕುಟುಂಬಸ್ಥರು ಸಹ ಕೋರಮಂಗಲದಲ್ಲಿರುವ ವಲಸೆ ರಕ್ಷಣಾ ಕಚೇರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಇದರಂತೆ ಕಾರ್ಯಪ್ರವೃತ್ತಗೊಂಡ ಐಎಫ್ಎಸ್ ಅಧಿಕಾರಿ ಶುಭಂ ಸಿಂಗ್ ನೇತೃತ್ವದ ತಂಡ ಕತಾರ್ಗೆ ತೆರಳಿ ಕಷ್ಟದಲ್ಲಿದ್ದ ನಾಲ್ವರು ಮಹಿಳೆಯರನ್ನು ಕಳೆದ ಗುರುವಾರ ಭಾರತಕ್ಕೆ ಕರೆ ತಂದಿದೆ.