ಬೆಂಗಳೂರು: ಕೊರೊನಾ ಎನ್ನುವ ಆಗೋಚರ ವೈರಾಣುವಿನ ಸಂಘರ್ಷ ಕನಸುಗಳ ರೆಕ್ಕೆಗೆ ಕತ್ತರಿ ಹಾಕಿತ್ತು. ಕೊರೊನಾ ಹರಡುವಿಕೆ ಹಿನ್ನೆಲೆ ಲಾಕ್ಡೌನ್ ಕರೆ ನೀಡಲಾಯಿತು. ಆ ದಿನದಿಂದ ಈವರೆಗೆ ಎಲ್ಲವೂ ಸ್ತಬ್ಧವಾಗಿದ್ದು, ಸಂಪೂರ್ಣ ಜೀವನ ಶೈಲಿಯೇ ಬದಲಾಗಿ ಹೋಯಿತು. ಈ ಶತಮಾನದ ಪಿಡುಗಾಗಿರುವ ಕೊರೊನಾ ವೈರಸ್, ಸಮಾಜದ ಪ್ರತಿಯೊಂದು ವರ್ಗದ ಜನರ ಜೀವನದಲ್ಲಿ ಬದಲಾವಣೆ ತಂದಿದೆ. ಲಾಕ್ಡೌನ್ ಎಂಬುದು ಶಿಕ್ಷಣ ವಲಯಕ್ಕೂ ದೊಡ್ಡ ಕೊಡಲಿಪೆಟ್ಟು ಕೊಟ್ಟಿದೆ. ಶಿಕ್ಷಣ ಸಂಸ್ಥೆಗಳು ಸ್ಥಗಿತಗೊಂಡಿರುವುದರಿಂದ ಎಲ್ಲಾ ವರ್ಗಗಳ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ.
ಎಲ್ಲವೂ ಸರಿಯಾಗಿ ಇದಿದ್ದರೆ ಇಂದು ಶಾಲಾ- ಕಾಲೇಜುಗಳು ಶುರುವಾಗುತ್ತಿದ್ದವು. ಆದರೆ ಕೊರೊನಾ ಅನ್ನುವ ಮಾಯೆ ಎಲ್ಲವನ್ನೂ ಉಲ್ಟಾಪಲ್ಟಾ ಮಾಡಿಬಿಡ್ತು. ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳು ವಂಚಿತರಾಗಬಾರದು ಎಂಬ ಕಾರಣಕ್ಕೆ ತರಗತಿಗೆ ಪೂರಕವಾಗಿ ಆನ್ಲೈನ್ ಕ್ಲಾಸ್ಗಳು ಶುರುವಾದ್ವು. ಸದ್ಯ ಮನೆಯಲ್ಲಿಯೇ ಸ್ಮಾರ್ಟ್ ಫೋನ್, ಟ್ಯಾಬ್, ಲ್ಯಾಪ್ ಟಾಪ್ ಅಂತ ಕೈನಲ್ಲಿ ಹಿಡಿದು ಕೂತು ಆನ್ಲೈನ್ ಶಿಕ್ಷಣ ಪಡೆಯುತ್ತಿದ್ದಾರೆ.
ಆದರೆ ಈ ಆನ್ಲೈನ್ ಶಿಕ್ಷಣದ ಹಲವು ಸಾಧಕ- ಬಾಧಕಗಳು ಇದ್ದು, ಯುವಕರು ಅನೇಕ ತೊಂದರೆ- ಅಪಾಯಗಳನ್ನು ಎದುರಿಸುತ್ತಿದ್ದಾರೆ. ಹ್ಯಾಕರ್ ಸಮಸ್ಯೆ, ಸೈಬರ್ ಕಿರುಕುಳ ಇತ್ಯಾದಿ ಸಮಸ್ಯೆಗಳನ್ನು ಸೈಬರ್ ತಜ್ಞರು ವಿವರಿಸಿದ್ದಾರೆ. ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಶಿಕ್ಷಣ ಸಂಸ್ಥೆಗಳಿಗೆ ಆಗುತ್ತಿರುವ ತೊಂದರೆಗಳೇನು? ಆನ್ಲೈನ್ನಲ್ಲಿ ನಡೆಯುತ್ತಿರುವ ಸೈಬರ್ ಕ್ರೈಂನಿಂದ ಹೊರ ಬರುವುದು ಹೇಗೆ? ಸೈಬರ್ ಸ್ಪೇಸ್ನಲ್ಲಿ ಸುರಕ್ಷಿತವಾಗಿ ಇರುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ಸೈಬರ್ ಸೆಕ್ಯುರಿಟಿ ಎಕ್ಸ್ಪರ್ಟ್ ಶುಭಮಂಗಳ ಸುನೀಲ್ ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.
ವಿದ್ಯಾರ್ಥಿಗಳು, ಶಾಲಾ ಆಡಳಿತ ಮಂಡಳಿಗಳು ಎದುರಿಸುತ್ತಿರುವ ತೊಂದರೆಗಳೇನು?
ಆನ್ಲೈನ್ ಪಾಠಕ್ಕೆ ಹೆಚ್ಚು Zoom ಆ್ಯಪ್ ಬಳಕೆ ಮಾಡುತ್ತಿದ್ದಾರೆ. ಇದನ್ನೇ ದುರುಪಯೋಗ ಮಾಡಿಕೊಳ್ಳುವ ಸೈಬರ್ ಹ್ಯಾಕರ್ಸ್ ಮಧ್ಯ ಪ್ರವೇಶಿಸಿ ಅನಗತ್ಯ ಅಶ್ಲೀಲ ವಿಡಿಯೋಗಳು ಬರುವಂತೆ ಮಾಡಿ ಮುಜುಗರ ಉಂಟು ಮಾಡುವ ಪ್ರಸಂಗವೇ ಹೆಚ್ಚಿದೆ. ಮಾನಸಿಕ ಖಿನ್ನತೆಗೆ ಒಳಪಡಿಸುವಂತೆ ಮಾಡುವುದು, ತರಗತಿ ಮಧ್ಯೆ ಅವಾಚ್ಯ ಶಬ್ದ ಬಳಸುವುದು ನಡೆದಿದೆ. ಇಂತಹ ಸಾಕಷ್ಟು ದೂರುಗಳು ದಾಖಲಾಗಿದ್ದು, ಇದಕ್ಕೆ ಸಾಕ್ಷಿಯೆಂಬಂತೆ ಅನ್ಯ ರಾಜ್ಯ ಕೊಲ್ಕತ್ತಾ, ದೆಹಲಿ, ನಮ್ಮ ನೆರೆ ಜಿಲ್ಲೆ ಬೆಳಗಾವಿ, ಬೆಂಗಳೂರಿನಲ್ಲೂ ಇಂಥ ಘಟನೆಗಳು ನಡೆದಿವೆ.
ಅನಗತ್ಯ ಫೋನ್ ಕಾಲ್ಸ್
ಆನ್ಲೈನ್ ಕ್ಲಾಸ್ಗಾಗಿ ಬೇರೆ ಬೇರೆ ಆ್ಯಪ್ನಲ್ಲಿ ಕನೆಕ್ಟ್ ಮಾಡುವ ಉದ್ದೇಶದಿಂದ ಮೊಬೈಲ್ ನಂಬರ್, ಇ ಮೇಲ್ ಐಡಿ ನೀಡಲಾಗುತ್ತೆ. ಇದನ್ನೇ ದುರುಪಯೋಗ ಮಾಡಿಕೊಳ್ಳುವವರು ನಂಬರ್ಗೆ ಬೇಡದ ಕರೆಗಳು ಬರುವುದು, ಮಸೇಜ್, ಬೆದರಿಕೆಯ ಆಡಿಯೋ ಕಳಿಸುವುದು ಆಗುವ ಸಂಭವವೇ ಹೆಚ್ಚು. ಸರ್ವರ್ ಹ್ಯಾಕ್ ಮಾಡುವುದು, ಬಳಿಕ ಆಡಳಿತ ಮಂಡಳಿಗೆ ಹಣಕ್ಕಾಗಿ ಪೀಡಿಸುವುದು ಮುಂತಾದ ಕಿರುಕುಳ ಪ್ರಕರಣಗಳು ವರದಿಯಾಗುತ್ತಿವೆ.
ಹ್ಯಾಕರ್ ಸಮಸ್ಯೆ ತಪ್ಪಿಸಿಕೊಳ್ಳಲು ಪರಿಹಾರವೇನು?
- ಒಂದೇ ಫೋನ್ ಅನ್ನು ಒಬ್ಬರಿಗಿಂತ ಹೆಚ್ಚು ಮಂದಿ ಉಪಯೋಗಿಸುವುವಾಗ ಯಾವ ರೀತಿ ಸುರಕ್ಷತೆ ವಹಿಸಬೇಕೆಂದು ಅರಿಯಬೇಕು.
- ಸೆಕ್ಯುರಿಟಿ ಸೆಟಿಂಗ್ಸ್ ಮಾಡಿಕೊಳ್ಳುವುದು.
- ಮಕ್ಕಳಿಗೆ ಸೈಬರ್ ಅಪರಾಧದ ಬಗ್ಗೆ ತಿಳಿ ಹೇಳುವುದು. ಈ ಮೂಲಕ ಖಾಸಗಿ ವಿಷಯಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದರ ಬಗ್ಗೆ ತಿಳಿಸುವುದು.
- ಶಾಲಾ- ಕಾಲೇಜು ಹಂತದಲ್ಲಿ ಆಡಳಿತ ಮಂಡಳಿಯವರು, ಶಿಕ್ಷಕರು ಸೈಬರ್ ಕ್ರೈಂ ಅಂದರೇನು? ಅದನ್ನು ಯಾವ ರೀತಿ ತಡೆಗಟ್ಟಬಹುದು ಎಂಬುದನ್ನು ಹೇಳಿಕೊಡುವುದು.
- ಆನ್ಲೈನ್ ಟೂಲ್ಸ್ ಉಪಯೋಗದ ಬಗ್ಗೆ ತಿಳುವಳಿಕೆ ಹಾಗೂ ಸೈಬರ್ ಸೆಕ್ಯುರಿಟಿ ಕನ್ಸಲ್ಟೆಂಟ್ ಟೀಂ ಒಬ್ಬರನ್ನು ನೇಮಕ ಮಾಡುವುದು.
- ಆನ್ಲೈನ್ ಕ್ಲಾಸ್ಗೆ ಇರುವ ಆ್ಯಪ್ ಬಳಸುವುದು. ಮೀಟಿಂಗ್ ಆ್ಯಪ್ಗಳನ್ನು ಕ್ಲಾಸ್ಗೆ ಬಳಸಬಾರದು.
- ವಿಸಿಟ್ ಮಾಡುವ ವೆಬ್ ಸೈಟ್ ಗಳು ಸುರಕ್ಷಿತವಾಗಿ ಇವೆಯಾ ಅಂತ ನೋಡಿಕೊಳ್ಳಬೇಕು.
ಆನ್ಲೈನ್ ಕ್ಲಾಸ್ ಫ್ರೀ, ಈ ಲಿಂಕ್ ಕ್ಲಿಕ್ ಮಾಡಿ ಎನ್ನುವ ಸಂದೇಶವನ್ನು ಸಂದೇಹದಿಂದಲೇ ನೋಡಿ, ನಂತರ ಕ್ಲಿಕ್ ಮಾಡಿ ಎಂದು ತಜ್ಞರು ಸಲಹೆ ನೀಡುತ್ತಾರೆ. ಆನ್ಲೈನ್ ನೆಟ್ವರ್ಕ್ನಿಂದ ಉಪಯೋಗವೂ ಇದೆ ದುರುಪಯೋಗವೂ ಇದೆ. ಹೀಗಾಗಿ, ಅಂಗೈನಲ್ಲೇ ಸಿಗುವ ಮೊಬೈಲ್ ಸ್ಕ್ರೀನ್ ಮೇಲೆ ಬಟನ್ ಕ್ಲಿಕ್ ಮಾಡುವ ಮುನ್ನ ಯೋಚಿಸಿ ನಂತರ ಮುಂದುವರಿಯಿರಿ. ನಾವು ಮಾಡುವ ಸಣ್ಣ ತಪ್ಪು ದೊಡ್ಡ ಸಮಸ್ಯೆಯನ್ನೇ ಸೃಷ್ಟಿ ಮಾಡಬಹುದು.