ಬೆಂಗಳೂರು: 'ನಮಗೆ ನಿಮ್ಮ ಭಿಕ್ಷೆ ಬೇಕಾಗಿಲ್ಲ', ಗೌರವಯುತ ಜೀವನವನ್ನು ನಡೆಸಲು ಅನುವು ಮಾಡಿಕೊಡಿ ಅಂತ ಸಚಿವ ಸುರೇಶ್ ಕುಮಾರ್ ವಿರುದ್ಧ ಖಾಸಗಿ ಶಾಲಾ ಶಿಕ್ಷಕರು ಆಕ್ರೋಶ ಹೊರಹಾಕಿದ್ದಾರೆ.
![Private teachers outrage against minister Suresh Kumar](https://etvbharatimages.akamaized.net/etvbharat/prod-images/7938955_693_7938955_1594189817533.png)
ನಾವು ಕೂಡ ಸರ್ಕಾರಿ ಶಿಕ್ಷಕರಂತೆ ಹಗಲಿರುಳು ಮಕ್ಕಳ ಹಾಗೂ ಸಮಾಜದ ಭವಿಷ್ಯಕ್ಕಾಗಿ ದುಡಿಯುತ್ತಿದ್ದೇವೆ. ಹಾಗೇ ಖಾಸಗಿ ಶಿಕ್ಷಣ ಸಂಸ್ಥೆಗಳು ನೀಡುತ್ತಿರುವ ಸಂಬಳದಿಂದ ಜೀವನ ನಡೆಸುತ್ತಿದ್ದೇವೆ. ಮೊನ್ನೆಯ ದಿನ ತಾವು ಸರ್ಕಾರಿ ಶಿಕ್ಷಕರ ಸಂಬಳದಲ್ಲಿ 2 ದಿನಗಳ ವೇತನವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವ ಶಿಕ್ಷಕರಿಗೆ ಸಹಾಯ ನೀಡಲು ಮನವಿ ಮಾಡಿಕೊಂಡಿದ್ದೀರಿ. ಅದಕ್ಕೆ ಒಪ್ಪಿರುವ ಎಲ್ಲಾ ಶಿಕ್ಷಕರ ಸಮೂಹಕ್ಕೆ ನಮ್ಮ ಖಾಸಗಿ ಶಾಲೆಯ ಶಿಕ್ಷಕರ ಕೃತಜ್ಞತೆಗಳನ್ನ ಸಲ್ಲಿಸುತ್ತೇವೆ. ಆದರೆ, ನಮಗೆ ನಿಮ್ಮ ಭಿಕ್ಷೆ ಬೇಕಾಗಿಲ್ಲ ಎಂದು ಶಿಕ್ಷಕರು ಕಟುವಾಗೇ ತಿರಸ್ಕರಿಸಿದ್ದಾರೆ.
ಶಿಕ್ಷಣವನ್ನು ನೀಡುತ್ತಿರುವ ನಮ್ಮ ಶಿಕ್ಷಣ ಸಂಸ್ಥೆಗಳಿಗೆ ಪೋಷಕರುಗಳು ಶಾಲಾ ಶುಲ್ಕವನ್ನು ಕಟ್ಟಲು ಕಟ್ಟುನಿಟ್ಟಾದ ನಿಯಮಗಳನ್ನು ರೂಪಿಸಿ. ಪೋಷಕರಿಗೆ ಶಾಲಾ ಶುಲ್ಕವನ್ನು ಕಟ್ಟಲು ಕರೆ ನೀಡಿದರೆ ಸಾಕು. ನಮ್ಮ ಶಿಕ್ಷಣ ಸಂಸ್ಥೆಗಳು ನಮಗೆ ಕೊಡಬೇಕಾದ ವೇತನವನ್ನು ಕೊಡುತ್ತಾರೆ. ಆದ್ದರಿಂದ ನಾವು ಗೌರವಯುತವಾಗಿ ಜೀವನವನ್ನು ನಡೆಸುತ್ತೇವೆ ಅಂತ ಪತ್ರ ಬರೆದಿದ್ದಾರೆ.