ಬೆಂಗಳೂರು: ಇಂದಿನಿಂದ ನಗರದಲ್ಲಿ ಹೋಟೆಲ್ ತಿಂಡಿ, ತಿನಿಸು, ಊಟದ ದರ ಏರಿಕೆಯಾಗಿದೆ. ಪೆಟ್ರೋಲ್ - ಡೀಸೆಲ್ ಗ್ಯಾಸ್ ಅಡುಗೆ ಎಣ್ಣೆ ಮುಂತಾದ ಅಗತ್ಯ ವಸ್ತುಗಳ ಬೆಲೆ ಏರಿಕೆಯಲ್ಲಿ ಬಳಲಿರುವ ಗ್ರಾಹಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ಕಳೆದ 9 ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 5.60 ರೂ ಏರಿಕೆಯಾಗಿದ್ದು, ಅಡುಗೆ ಎಣ್ಣೆಯೂ ಕೆ. ಜಿಗೆ 200 ರೂಪಾಯಿ ತಲುಪಿದೆ. ಗ್ಯಾಸ್, ಅಡುಗೆ ಎಣ್ಣೆ ಬೆಲೆ ಹೆಚ್ಚಳದಿಂದ ಹೋಟೆಲ್ ಊಟ ದುಬಾರಿಯಾಗಿದೆ ಎಂದು ಹೋಟೆಲ್ ಉದ್ದಿಮೆದಾರರು ತಿಳಿಸಿದ್ದಾರೆ.
ಮಸಾಲೆ ದೋಸೆ 75 ರಿಂದ 80 ರೂ ಏರಿದೆ. ಇಡ್ಲಿ, ವಡೆ 40 ರಿಂದ 45 ರೂಗೆ, ಕಾಫಿ, ಟೀ ಬೆಲೆ 15 ರಿಂದ 20 ರೂ. ಗೆ ಏರಿಕೆ ಕಂಡಿದೆ. ಚೌಚೌ ಬಾತ್ 70 ರೂ. 75 ರೂ. ಸೌಥ್ ಇಂಡಿಯನ್ ಊಟ 95 ರೂ. ಯಿಂದ 100 ರೂ ಹೆಚ್ಚಳವಾಗಿದೆ. ರೈಸ್ ಬಾತ್ 40 ರಿಂದ 50 ರೂ.ಗೆ, ರವಾ ಇಡ್ಲಿ 45 ರೂ. ಯಿಂದ 50ಕ್ಕೆ ಏರಿಕೆಯಾಗಿದ್ದರೆ, ಅಕ್ಕಿ ರೊಟ್ಟಿ 45 ರಿಂದ 50 ರೂ.ಗೆ ಹೆಚ್ಚಳ ಮಾಡಿ ಹೋಟೆಲ್ ಮಾಲೀಕರು ವ್ಯಾಪಾರ ನಡೆಸುತ್ತಿದ್ದಾರೆ.
ಕೆಲ ಹೋಟೆಲ್ಗಳಲ್ಲಿ ಇಲ್ಲ ಬೆಲೆ ಹೆಚ್ಚಳ: ಕೆಲ ಹೋಟೆಲ್ ಮಾಲೀಕರು ಕೋವಿಡ್ ಸೇರಿದಂತೆ ಹಲವು ಕಾರಣಗಳಿಂದ ಬೆಲೆ ಹೆಚ್ಚಳ ಮಾಡಿಲ್ಲ. ವ್ಯಾಪಾರದಲ್ಲಿ ಅಷ್ಟಾಗಿ ಹೆಚ್ಚಳ ಕಂಡು ಬರುತ್ತಿಲ್ಲ. ಹೀಗಾಗಿ, ಇರುವ ಗ್ರಾಹಕರನ್ನು ಕಳೆದುಕೊಳ್ಳುವುದು ಹೇಗೆ? ಎನ್ನುವ ಚಿಂತೆ ಕೆಲ ಹೋಟೆಲ್ ಮಾಲೀಕರದ್ದಾಗಿದೆ.