ಬೆಂಗಳೂರು: ನಗರದ ಹೊಂಗಸಂದ್ರದ ವಿದ್ಯಾಜ್ಯೋತಿ ನಗರದಲ್ಲಿ ಬಿಬಿಎಂಪಿಯು ಸ್ವಯಂ ಸೇವಕರ ಸಹಾಯದಿಂದ ಪ್ರತಿ ಮನೆ-ಮನೆಗೂ ತೆರಳಿ ಉಚಿತ ಹಾಲು ಪೂರೈಕೆ ಮಾಡಲಾಗಿದೆ.
ಇಂದು ಸಾವಿರದ ನೂರು ಲೀಟರ್ ಹಾಲು ಪೂರೈಕೆ ಮಾಡಲಾಗಿದೆ. ಇನ್ನು ಕಸ ತೆಗೆದುಕೊಳ್ಳಲು ಕೂಡಾ ಸೂಕ್ತ ವ್ಯವಸ್ಥೆ ಮಾಡಲಾಗಿದ್ದು, ಕಸದ ವಾಹನಗಳಿಗೆ ಸ್ಯಾನಿಟೈಸ್ ಮಾಡಿಕೊಂಡು, ಜೊತೆಗೆ ಪ್ರತಿ ಮನೆಯ ಕಸಕ್ಕೂ ಕೆಮಿಕಲ್ ಸಿಂಪಡಿಸಿ ಕಸ ಪಡೆಯಲಾಗ್ತಿದೆ. ಮುಂಜಾಗ್ರತಾ ಕ್ರಮವಾಗಿ ಕಸ ಪಡೆಯುವ ಪೌರ ಕಾರ್ಮಿಕರಿಗೆ ಪಿಪಿಇ ಕಿಟ್ ನೀಡಲಾಗಿದೆ.
ಇನ್ನು ಹೊಂಗಸಂದ್ರದಲ್ಲಿ ತರಕಾರಿ ಹಂಚಲು ಖಾಸಗಿ ವ್ಯಕ್ತಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಆತ ಮನೆ ಮನೆಗೂ ತೆರಳಿ ತರಕಾರಿ ವ್ಯಾಪಾರ ಮಾಡುತ್ತಿದ್ದಾನೆ. ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆಯನ್ನು ಬಿಬಿಎಂಪಿಯೇ ಮಾಡಿದೆ.
ಕಂಟೇನ್ಮೆಂಟ್ ವಾರ್ಡ್ ಆಗಿರುವ ಕಾರಣ ಕಸ ಸಂಗ್ರಹ ಮಾಡುವಾಗ ಭಾರಿ ಎಚ್ಚರಿಕೆ ವಹಿಸುತ್ತಿದ್ದು, ಪೌರಕಾರ್ಮಿಕರಿಗೆ ಪಿಪಿಇ ಕಿಟ್ ಹಾಗೂ ಮುಚ್ಚಿದ ಕವರ್ನಲ್ಲಿ ಕಸ ಸಂಗ್ರಹಿಸಿ, ಮಾಸ್ಕ್ಗಳನ್ನ ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದೆ. ಇನ್ನೊಂದೆಡೆ ಹೊಂಗಸಂದ್ರದ ಜನರೂ ಪಾಲಿಕೆಯ ನಿರ್ದೇಶನಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದು, ಸೀಲ್ ಡೌನ್ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ.
ಇನ್ನು ಟೆಸ್ಟ್ ನಡೆಸಿದ ಸಂದರ್ಭದಲ್ಲಿ ಎಲ್ಲರ ರಿಪೋರ್ಟ್ ನೆಗೆಟಿವ್ ಬಂದ ಹಿನ್ನೆಲೆ ಜನ ಕೊಂಚ ನಿರಾಳವಾಗಿದ್ದಾರೆ. ವಲಸೆ ಕಾರ್ಮಿಕರನ್ನು ಹೊರತುಪಡಿಸಿ ಹೊಂಗಸಂದ್ರ ಮೂಲ ನಿವಾಸಿಗಳಲ್ಲಿ ಒಂದೇ ಒಂದು ಕೊರೊನಾ ಪಾಸಿಟಿವ್ ಪತ್ತೆಯಾಗಿಲ್ಲ.