ಬೆಂಗಳೂರು: ಕೋವಿಡ್ -19 ನಿಷೇಧಾಜ್ಞೆ ನಡುವೆ ನಗರ ಆಯುಕ್ತರ ಕಚೇರಿಯಲ್ಲಿ ಜನರಿಗಾಗಿ 24x7 ಸಮಯ ಕಾರ್ಯ ನಿರ್ವಹಿಸುತ್ತಿರುವ ನಮ್ಮ 100 ನಂಬರ್ ಗೆ ಬಹಳಷ್ಟು ಕರೆಗಳ ಬರಪೂರವೇ ಹರಿದು ಬರ್ತಿದೆ.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ನಮ್ಮ 100ಗೆ ಕೊರೊನಾ ಸೋಂಕುವಿನ ಕುರಿತು ಸಮಸ್ಯೆ ಅಥವಾ ಯಾರಾದ್ರೂ ಸೊಂಕಿತರು ಕಂಡು ಬಂದಾಗ ನಮ್ಮ 100 ಕರೆ ಮಾಡಿದ್ರೆ ಪೊಲೀಸರು ಸ್ಥಳಕ್ಕೆ ಬಂದು ಸಹಾಯ ಮಾಡ್ತಾರೆ ಎಂದು ನಗರ ಆಯುಕ್ತ ಭಾಸ್ಕರ್ ರಾವ್ ಕೂಡ ಸೂಚಿಸಿದ್ರು.
ಹೀಗಾಗಿ ಕಮಾಂಡ್ ಸೆಂಟರ್ ಡಿಸಿಪಿ ಇಶಾ ಪಂಥ್ ನೇತೃತ್ವದಲ್ಲಿ ನಡೆಯುತ್ತಿರುವ ನಮ್ಮ 100ಗೆ ಕಳೆದ 10 ದಿನಗಳಲ್ಲಿ ಸಾವಿರಾರು ಕರೆಗಳ ಸಾಲೇ ಬರ್ತಿದೆ . ಪೊಲೀಸ್ ಠಾಣೆಗೆ ಭೇಟಿ ನೀಡದೇ ಠಾಣಾಧಿಕಾರಿಗಳ ಜೊತೆಗೆ ಮಾತಾನಾಡದೇ ನೆರವಾಗಿ ನಮ್ಮ 100ಗೆ ಕರೆ ಮಾಡಿದಾಗ ಅಲ್ಲಿರುವ ಸಿಬ್ಬಂದಿ ಸಮಸ್ಯೆ ಆಲಿಸ್ತಾರೆ.
ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ ಹೋಂ ಕ್ವಾರಂಟೈನ್ ನಲ್ಲಿರುವ ಕೆಲವು ಮಂದಿ ಕರೆ ಮಾಡಿ ಮನೆಯಲ್ಲಿ 14 ದಿನ ಇರೋಕ್ಕೆ ಆಗ್ತಿಲ್ಲಾ, ಸುತ್ತಾ ಮುತ್ತಾ ಜನ ಕೊರೊನಾ ಬಂದಿದೆ ಎಂದು ಹೀಯಾಳಿಸ್ತಾರೆ. ನಮ್ಮ ಮನೆಯವರನ್ನ ಮಾತಾನಾಡಿಸುವಾಗ ಬಹಳ ಭಯ ಪಟ್ಟು ಮಾತಾಡ್ತಾರೆ . ದಯವಿಟ್ಟು ಮನೆ ಬಳಿ ಬನ್ನಿ ಎಂದು ಒಬ್ಬರು ಗೊಳಾಡಿದ್ರೆ,
ಇನ್ನು ಕುಡುಕರ ಕಾಟ ತಾಳಲಾರದೇ ಅಕ್ಕಪಕ್ಕದ ಮನೆಯವರು, ಒಮ್ಮೆ ಬಂದು ಹೊಯ್ಸಳದಲ್ಲಿ ಕರೆದುಕೊಂಡು ಹೋಗಿ ಅನ್ನೋ ಕರೆ. ಇನ್ನು ಯುವಕರ ಗೋಳು ಕೇಳಬೇಕಾ ? ಬೀದಿ ಬದಿ ಅಂಗಡಿಗಳಿಗೆಲ್ಲ ಸಿಗರೇಟ್ಗಾಗಿ ಸುತ್ತಿ ಸುತ್ತಿ ಸಾಕಾಗ್ತಿದೆ. ಮತ್ತೊಂದೆಡೆ ಕೊರೊನಾ ಎಫೆಕ್ನಿಂದ ಪಿಜಿ ಮಾಲೀಕರು ನಮ್ಮನ್ನ ಸರಿಯಾಗಿ ನೋಡ್ತಿಲ್ಲ . ಅವರಿಗೆ ಬುದ್ದಿ ಹೇಳಿ ಅನ್ನೋ ಕರೆ ಹೀಗೆ ನಾನಾ ರೀತಿಯ ಕರೆಗಳು ನಮ್ಮ 100ಗೆ ಬರುತ್ತಿದೆ. ಈ ಕರೆ ಸ್ವೀಕಾರ ಮಾಡಿ ಸಮಾಧಾನ ಮಾಡೋದ್ರಲ್ಲೆ ಸುಸ್ತಾಗಿದ್ದಿವಿ ಎಂದು ಹೆಸರು ಹೇಳಲು ಇಚ್ಚೆ ಪಡದ ಸಿಬ್ಬಂದಿಯೊಬ್ಬರು ತಮ್ಮ ಸಮಸ್ಯೆಗಳನ್ನು ಈ ಟಿವಿ ಭಾರತ್ ಜೊತೆ ಹಂಚ್ಕೊಂಡಿದ್ದಾರೆ
ಇನ್ನು ಈ ವಿಚಾರ ಹಿರಿಯ ಸಿಬ್ಬಂದಿ ಕಿವಿಗೆ ತಲುಪಿದ್ದು, ವಿನಾಕಾರಣ ಕರೆ ಮಾಡಿ ಮಾತಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಿ ಎಂದು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.