ಬೆಂಗಳೂರು : ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣ ಬೆನ್ನಲ್ಲೇ ಕಾಟನ್‌ಪೇಟೆ ಸೇರಿದಂತೆ ಸುತ್ತಮುತ್ತಲಿನ ಏರಿಯಾಗಳ ರೌಡಿಶೀಟರ್ ಮನೆಗಳ ಮೇಲೆ ದಾಳಿ ನಡೆಸಿದ್ದ ನಗರ ಪಶ್ಚಿಮ ವಿಭಾಗ ವಿಭಾಗದ ಪೊಲೀಸರು ಮತ್ತೆ ದಾಳಿ ಮುಂದುವರೆಸಿದ್ದಾರೆ.
ಜೆಜೆನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಾದರಾಯನಪುರ, ರಾಯಪುರ, ಅರಾಫತ್‌ನಗರ, ವಿಎಸ್‌ಗಾರ್ಡನ್, ಜನತಾ ಕಾಲೋನಿ, ಹಳೆಗುಡ್ಡದ ಹಳ್ಳಿ ರೌಡಿಶೀಟರ್ಗಳ ಮನೆ ಮೇಲೆ ಡಿಸಿಪಿ ಸಂಜೀವ್ ಪಾಟೀಲ್ ನೇತೃತ್ವದಲ್ಲಿ ಪ್ರತ್ಯೇಕವಾಗಿ 3 ಪೊಲೀಸ್ ತಂಡಗಳು ದಾಳಿ ನಡೆಸಿ ಪರಿಶೀಲನೆ ನಡೆಸಿವೆ.
ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದ 29 ರೌಡಿಗಳ ಮನೆ ಮೇಲೆ ದಾಳಿ ನಡೆಸಲಾಗುತ್ತಿದೆ. ಅಹಿತಕರ ಘಟನೆಯಲ್ಲಿ ಭಾಗಿಯಾದರೆ ಬಂಧಿಸಲಾಗುವುದು. ಅನುಮತಿ ಇಲ್ಲದೆ ಬೆಂಗಳೂರು ತೊರೆದು ಅಜ್ಞಾತ ಸ್ಥಳದಲ್ಲಿ ತೊಡಗುವುದು, ಮನೆಯಲ್ಲಿ ಸುಖಾಸುಮ್ಮನೆ ಮಾರಕಾಸ್ತ್ರ ಇಟ್ಟುಕೊಳ್ಳುವುದು ಕಂಡು ಬಂದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವುದು. ಹಫ್ತಾ ವಸೂಲಿ, ಡ್ರಗ್ಸ್ ದಂಧೆ, ಸುಲಿಗೆ, ಗೂಂಡಾ ಚಟುವಟಿಕೆಯಲ್ಲಿ ಭಾಗಿಯಾದರೆ ಮುಲಾಜಿಲ್ಲದೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಬಳಿಕ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಗಂಭೀರವಾಗಿದೆ. ಕಾಟನ್ ಪೇಟೆ, ಜೆಜೆನಗರ, ಬ್ಯಾಟರಾಯಪುರ ಹಾಗೂ ಚಿಕ್ಕಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರೌಡಿ ಚಟುವಟಿಕೆ ಹಾಗೂ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ಆರೋಪಿಗಳ ಬಗ್ಗೆ ನಿಗಾವಹಿಸುವಂತೆ ಖಡಕ್ ಸೂಚನೆ ಹಿನ್ನೆಲೆ ಪಶ್ಚಿಮ ವಿಭಾಗದ ಪೊಲೀಸರು ರೌಡಿಶೀಟರ್ಗಳ ಮನೆ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಕಳೆದ ಜೂನ್ 29ರಂದು ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಭಕ್ಷಿಗಾರ್ಡನ್, ರೋಜ್‌ಗಾರ್ಡನ್, ಪೆಕ್ಷನ್ ಮೊಹಲ್ಲಾ, ಅಂಜನಪ್ಪ ಗಾರ್ಡನ್, ಛಲವಾದಿ ಪಾಳ್ಯ ಸೇರಿ 6 ಏರಿಯಾಗಳಲ್ಲಿ ದಾಳಿ ಮಾಡಿದ್ದ ಪೊಲೀಸರು ಮಾರಕಾಸ್ತ್ರ ಇರಿಸಿ, ಶಾಂತಿಗೆ ಭಂಗ ತಂದು ಅಹಿತಕರ ಘಟನೆ ನಡೆಯದಂತೆ 25ಕ್ಕೂ ರೌಡಿಗಳು ಸೇರಿದಂತೆ 75 ಮಂದಿ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ ವ್ಯಕ್ತಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದರು. ಅಪರಾಧ ಪ್ರಕರಣ ಹಿನ್ನೆಲೆ ಹೊಂದಿರುವವರು ಮನೆ ಖಾಲಿ ಮಾಡಿ ತೆರಳಿರುವುದು ಹಾಗೂ ತಪಾಸಣೆ ವೇಳೆ 42 ಜನರ ವಿವಿಧ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದರು.