ಬೆಂಗಳೂರು: ಅಪಹರಣಕ್ಕೆ ಒಳಗಾಗಿದ್ದ ಮೂರು ವರ್ಷದ ಮಗುವನ್ನು ಪ್ರಕರಣ ದಾಖಲಾದ 48 ಗಂಟೆಯೊಳಗೆ ವಿದ್ಯಾರಣ್ಯಪುರ ಪೊಲೀಸರು ಪತ್ತೆ ಹಚ್ಚಿ ಪೋಷಕರ ಮಡಿಲಿಗೆ ಸೇರಿಸಿದ್ದಾರೆ.
ಮೂರು ವರ್ಷದ ಅರ್ಜುನ್ ಅಪಹರಣಕ್ಕೆ ಒಳಗಾಗಿ ಸುರಕ್ಷಿತವಾಗಿ ತಾಯಿ ಮಡಿಲು ಸೇರಿದ್ದಾನೆ. ಅಪಹರಣ ಮಾಡಿದವರು ಯಾರು ಎಂಬುದು ತಿಳಿದು ಬಂದಿಲ್ಲ. ಅಪಹರಣಕಾರರ ಪತ್ತೆಗಾಗಿ ವಿಶೇಷ ತಂಡ ರಚಿಸಿ ಶೋಧ ನಡೆಸಲಾಗುತ್ತಿದೆ ಎಂದು ನಗರ ಆಗ್ನೇಯ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ. ‘
ಘಟನೆಯ ಹಿನ್ನೆಲೆ:
ಅರ್ಜುನ್ ಪೋಷಕರಾದ ಬಸವರಾಜ್ ಹಾಗೂ ಲಕ್ಷ್ಮೀ ದಂಪತಿ ಮೂಲತಃ ಯಾದಗಿರಿಯವರಾಗಿದ್ದು ಕಳೆದ ಮೂರು ವರ್ಷಗಳಿಂದ ನಗರದಲ್ಲಿ ಗಾರೆ ಕೆಲಸ ಮಾಡುತ್ತಿದ್ದರು. ಸಿಂಗಾಪುರ ಹೊಸಬಾಳು ನಗರದಲ್ಲಿ ಸಣ್ಣ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದರು. ದಂಪತಿಗೆ ಮೂರು ಮಕ್ಕಳಿದ್ದು ಈ ಪೈಕಿ ಎರಡನೇ ಮಗು ಮೂರು ವರ್ಷದ ಅರ್ಜುನ್ ಕಳೆದ ಫೆ.29 ರಂದು ಮನೆ ಮುಂದೆ ಆಟವಾಡುತ್ತಿದ್ದ. ಈ ವೇಳೆ ವ್ಯವಸ್ಥಿತವಾಗಿ ಸಂಚು ರೂಪಿಸಿಕೊಂಡು ಅಪಹರಣಕಾರರು ಮಗುವನ್ನು ಕಿಡ್ನ್ಯಾಪ್ ಮಾಡಿದ್ದಾರೆ.
ಮನೆಯಿಂದ ಹೊರಬಂದು ಆಟವಾಡುತ್ತಿದ್ದ ಮಗು ನಾಪತ್ತೆಯಾಗಿರುವುದನ್ನು ಕಂಡು ಹುಡುಕಾಟ ನಡೆಸಿ ಪ್ರಯೋಜನವಾಗದ ಕಾರಣ ಪೋಷಕರು ವಿದ್ಯಾರಣ್ಯಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಇನ್ ಸ್ಪೆಕ್ಟರ್ ಪ್ರವೀಣ್ ಕುಮಾರ್ ನೇತೃತ್ವದ ತಂಡವು ಕಳೆದ ಎರಡು ದಿನಗಳಿಂದ ಸತತವಾಗಿ ಕಾರ್ಯಾಚರಣೆ ನಡೆಸಿತ್ತು. ಈ ನಡುವೆ ಇಂದು ಮಲ್ಲೇಶ್ವರ ಬಳಿ ಅಪರಿಚಿತರು ಮಗು ಪತ್ತೆಯಾಗಿರುವುದರ ಕುರಿತು ಸುಬ್ರಮಣ್ಯಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಪತ್ತೆಯಾದ ಮಗು ಮೂರು ವರ್ಷದ ಅರ್ಜುನ್ ಎಂಬುದು ತಿಳಿದು ಬಂದಿದೆ.