ಬೆಂಗಳೂರು: ಮಂಗಮ್ಮನಪಾಳ್ಯದ ಮದೀನ ಪಾಳ್ಯದಲ್ಲಿ ಸದ್ಯ ಟೆನ್ಶನ್ ಶುರುವಾಗಿದೆ. ಕಾರಣ ರೋಗಿ-911 ಮದೀನ ಪಾಳ್ಯದ 2ನೇ ಮುಖ್ಯ ರಸ್ತೆಯ 8ನೇ ಕ್ರಾಸ್ ಹತ್ತಿರದ ಸೌಮ್ಯ ಕ್ಲಿನಿಕ್ನಲ್ಲಿ ಮೂರು ದಿನ ಚಿಕಿತ್ಸೆ ಪಡೆದುಕೊಂಡಿದ್ದಾನೆ. ಆದರೆ ಸೌಮ್ಯ ಕ್ಲಿನಿಕ್ನವರು ರೋಗಿಯ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡದೆ ಮುಚ್ಚಿಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ಈಗ ಅವರ ಮೇಲೆ ಕ್ರಮ ಜರುಗಿಸಲು ಆರೋಗ್ಯ ಇಲಾಖೆ ಮುಂದಾಗಿದೆ.
ಕಳೆದ ಭಾನುವಾರ ಆತನ ತಮ್ಮ ಜಯನಗರದ ಸಾರ್ವಜನಿಕ ಆಸ್ಪತ್ರೆಗೆ ಪರೀಕ್ಷೆಗೆಂದು ಕರೆದುಕೊಂಡು ಹೋಗಿದ್ದಾರೆ. ಇವತ್ತು ಅವರ ವರದಿಯಲ್ಲಿ ಕೊರೊನಾ ಪಾಸಿಟಿವ್ ಎಂದು ಬಂದಿದೆ. ಇವರು ತಮಿಳುನಾಡು ಮೂಲದವರಾಗಿದ್ದು, ಚಿಕ್ಕಂದಿನಿಂದಲೂ ಇಲ್ಲೇ ವಾಸವಾಗಿದ್ದಾರೆ. ಟಾಟ್ ಏಸ್ ವಾಹನವಿಟ್ಟುಕೊಂಡು ಬಿಲ್ಡಿಂಗ್ ಕನ್ಸ್ಟ್ರಕ್ಷನ್ ಮನೆಗಳಿಗೆ ಪಿಲ್ಲರ್ಗಳ ಕಬ್ಬಿಣ ಸಪ್ಲೆ ಮಾಡ್ತಿದ್ದರು. ಕಳೆದೆರಡು ತಿಂಗಳಿನಿಂದ ಮನೆಯಲ್ಲೇ ಇದ್ದರು ಎನ್ನಲಾಗಿದೆ.
ಸದ್ಯ ಇವರ ಸಂಪರ್ಕದಲ್ಲಿದ್ದ 7 ಜನರನ್ನ ಕ್ವಾರಂಟೈನ್ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನ ನಗರದ ಸಿವಿ ರಾಮನ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ದ್ವಿತೀಯ ಸಂಪರ್ಕದಲ್ಲಿದ್ದ 27 ಜನರನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಲಾಗಿದೆ. ಮದೀನ ನಗರದ ಎಲ್ಲಾ ಕ್ರಾಸ್ಗಳಿಗೆ ಬಿಬಿಎಂಪಿ ಸಿಬ್ಬಂದಿ ಸ್ಪ್ರೇ ಹೊಡೆದು ಬ್ಲೀಚಿಂಗ್ ಪೌಡರ್ ಹಾಕಿದ್ದಾರೆ.