ದೇವನಹಳ್ಳಿ(ಬೆಂಗಳೂರು): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ತಪಾಸಣೆ ಮಾಡುವ ಸಮಯದಲ್ಲಿ ಓರ್ವ ಸಿಐಎಸ್ಎಫ್ ಮಹಿಳಾ ಇನ್ಸ್ಪೆಕ್ಟರ್ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದಲ್ಲದೆ ಹಲ್ಲೆ ನಡೆಸಿದ್ದಾರೆ. ಕರ್ತವ್ಯ ನಿರತ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಪ್ರಯಾಣಿಕನ ವಿರುದ್ಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಡಿದ ನಶೆಯಲ್ಲಿದ್ದ ಪ್ರಯಾಣಿಕ ಮಹಿಳಾ ಅಧಿಕಾರಿ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕೆಐಎಎಲ್ನಲ್ಲಿ ಡಿಸೆಂಬರ್ 25ರ ಸಂಜೆ 5:10 ಸಮಯದಲ್ಲಿ ಘಟನೆ ನಡೆದಿದೆ. ಜಾಕಿ ಅಮ್ಮನೂರ್ ಖಾಸಿಮ್ ಎಂಬ ವ್ಯಕ್ತಿ ಬೆಂಗಳೂರಿನಿಂದ ಕೊಚ್ಚಿನ್ಗೆ ಪ್ರಯಾಣ ಬೆಳಸಿದ್ದರು. ಸೆಕ್ಯೂರಿಟಿ ಚೆಕ್ನಲ್ಲಿ ಸಿಐಎಸ್ಎಫ್ ಮಹಿಳಾ ಇನ್ಸ್ಪೆಕ್ಟರ್ ಧನೇಶ್ವರಿ ಕುಟ್ಟಾಮ್ ಕರ್ತವ್ಯದಲ್ಲಿದ್ದರು.
ಜಾಕಿ ಅಮ್ಮನೂರ್ ಖಾಸಿಮ್ ಗ್ರೀನ್ ಕಾರ್ಡ್ ಕಳೆದಿರುವ ಬಗ್ಗೆ ಮಹಿಳಾ ಇನ್ಸ್ಪೆಕ್ಟರ್ ಅವರಿಗೆ ತಿಳಿಸಿದ್ದಾರೆ. ಲಾಸ್ಟ್ ಆಂಡ್ ಫೌಂಡ್ ದೂರು ನೀಡುವಂತೆ ಹೇಳಿದ ಅಧಿಕಾರಿ ಫಾರಂ ಸಹ ನೀಡಿದ್ದರು. ಈ ಸಮಯದಲ್ಲಿ ದಾಖಲೆಗಳನ್ನು ಮಹಿಳಾ ಅಧಿಕಾರಿಯ ಮೇಲೆ ಎಸೆದು ಕಿರಿಚಾಡಿದ್ದಾರೆ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಲ್ಲದೆ ಮಹಿಳಾ ಅಧಿಕಾರಿ ಮೇಲೆ ಹಲ್ಲೆ ಸಹ ನಡೆಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
ಕರ್ತವ್ಯ ನಿರತ ಮಹಿಳಾ ಅಧಿಕಾರಿಯ ಕೆಲಸಕ್ಕೆ ಅಡ್ಡಿಪಡಿಸಿದ್ದು, ನಿಂದನೆ ಮತ್ತು ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ಹೊಸ ವರ್ಷಾಚರಣೆ ವೇಳೆ ಫೋಟೋ ಗಲಾಟೆ : ಯುವಕ ಯುವತಿಯರ ಮೇಲೆ ಪುಂಡರಿಂದ ಹಲ್ಲೆ