ಬೆಂಗಳೂರು: 79A, B ತಿದ್ದುಪಡಿ ಮೂಲಕ ರೈತರಲ್ಲದವರಿಗೆ ಕೃಷಿ ಭೂಮಿ ಖರೀದಿಸಲು ಅವಕಾಶ ಕೊಡುವುದು ಸ್ವಾಗತಾರ್ಹವಾದ್ರೂ ಕೈಗಾರಿಕಾ ಉದ್ದೇಶಕ್ಕೆ ಈ ಭೂಮಿಯನ್ನು ಬಳಸಬಾರದು. ಭವಿಷ್ಯದಲ್ಲಿಯೂ ಕೃಷಿಯೇತರ ಚಟುವಟಿಕೆಗೆ ಅವಕಾಶ ನಿರ್ಬಂಧಿಸಬೇಕು ಎಂದು ವಿವಿಧ ಸಂಘಟನೆಗಳು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಒತ್ತಾಯಿಸಿವೆ.
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಭಾರತೀಯ ಕಿಸಾನ್ ಸಂಘ, ಸ್ವದೇಶಿ ಜಾಗರಣ ಮಂಚ್ ಹಾಗೂ ಕೃಷಿ ಪ್ರಯೋಗ ಪರಿವಾರ ಈ ಮೂರು ಸಂಘಟನೆಗಳ ಪ್ರಮುಖರು ಭೇಟಿ ನೀಡಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಭೂಸುಧಾರಣಾ ಕಾಯ್ದೆಯ ತಿದ್ದುಪಡಿಯ ಸಾಧಕ ಬಾಧಕ ಕುರಿತು ಚರ್ಚಿಸಿದರು. ಕಾಯ್ದೆ ದುರುಪಯೋಗವಾಗುವ ಸಾಧ್ಯತೆ ಇದೆ. ಹಾಗಾಗಿ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಬೇಕು ಎಂದು ಮನವಿ ಪತ್ರ ಸಲ್ಲಿಸಿದರು.
ಬೇಡಿಕೆಗಳು :
1, 79 A, B ತಿದ್ದುಪಡಿ ಮೂಲಕ ರೈತರಲ್ಲದವರಿಗೆ ಕೃಷಿ ಭೂಮಿ ಖರೀದಿಸಲು ಅವಕಾಶ ಕೊಡುವುದು ಸ್ವಾಗತಾರ್ಹ. ಕೃಷಿಗೆ ಹೆಸರು, ವಿದ್ಯಾವಂತರು ಬರುವುದು ಒಳ್ಳೆಯದೇ.. ಆದರೆ, ಹಾಗೆ ಕೃಷಿ ಭೂಮಿ ಪಡೆದವರು ಅಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆ ಮಾಡಬೇಕು. ಕೈಗಾರಿಕಾ ಉದ್ದೇಶಕ್ಕೆ ಈ ಭೂಮಿಯನ್ನು ಬಳಸಬಾರದು ಮತ್ತು ಮುಂದೆ ಸದರಿ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಮಾರುವ ಅವಕಾಶವೂ ಇರಬಾರದು.
2. ಆದರೆ, ಸರ್ಕಾರದ ಈ ಕಾಯ್ದೆ ತಿದ್ದುಪಡಿ ಪ್ರಸ್ತಾಪ ಕೈಗಾರಿಕೆಗಳಿಗೆ, ರಿಯಲ್ ಎಸ್ಟೇಟ್ ಉದ್ಯಮಕ್ಕೆ ಪೂರಕವಾಗಿದೆ ಎಂಬ ವಾದ ಕೇಳಿ ಬರುತ್ತಿದೆ. ಸರ್ಕಾರ ರೈತರ ಪರ ಸೃಷ್ಟಿ ನಿಲುವು ಪ್ರಕಟಿಸದಿರುವುದು ನಮ್ಮ ಆತಂಕಕ್ಕೆ ಕಾರಣ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ವೀರೇಂದ್ರ ಪಾಟೀಲ್, ದೇವೇಗೌಡ ನಂತರ ರೈತ ಕುಟುಂಬದಿಂದ ಅಧಿಕಾರಕ್ಕೆ ಬಂದ ವ್ಯಕ್ತಿ ನೀವು ಮಾತ್ರ. ಕೇವಲ ರೈತ ಕುಟುಂಬದಿಂದ ಬಂದಿದ್ದು ಮಾತ್ರವಲ್ಲ, ರೈತಾಪಿ ಗೇಣಿದಾರರ ಪರ ಬೆಂಗಳೂರಿನ ತನಕ ಹೋರಾಟದ ಪಾದಯಾತ್ರೆ ಮಾಡಿ ಅಂದಿನ ಸರ್ಕಾರಗಳನ್ನು ನಡುಗಿಸಿದವರು ನೀವು. ಇಂತಹ ಹಿನ್ನೆಲೆಯ ನಿಮ್ಮ ನೇತೃತ್ವದ ಸರ್ಕಾರ ಕೃಷಿ ಭೂಮಿಯ ಕಾಯ್ದೆ ತಿದ್ದುಪಡಿ ವಿಷಯದಲ್ಲಿ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ನಿರ್ಧಾರಕ್ಕೆ ಬಂದಿರುವುದನ್ನು ಒಪ್ಪಲು ಸಾಧ್ಯವಿಲ್ಲ.
3, ಹೀಗಾಗಿ ಕಾಯ್ದೆಗೆ ತಿದ್ದುಪಡಿ ತರುವ ಮೊದಲು ನೀವು ರೈತ ಸಂಘಟನೆಗಳೊಂದಿಗೆ ಚರ್ಚಿಸಬೇಕು. ವಿಷಯ ಪರಿಣಿತರ ಸಮಿತಿ ರಚಿಸಿ ಸಲಹೆ ಪಡೆಯಬೇಕು.
4. ಹೊಸದಾಗಿ ಕೃಷಿ ಭೂಮಿ ಖರೀದಿಸುವವರಿಗೆ ಗರಿಷ್ಠ ಮಿತಿಯನ್ನು ಹಿಂದಿನಂತೆಯೇ 54 ಎಕರೆಗೆ ಮುಂದುವರಿಸುವುದು ಮತ್ತು ಹೊಸದಾಗಿ ಕೃಷಿ ಭೂಮಿ ಖರೀದಿಸಿದರು ಕನಿಷ್ಠ 8 ವರ್ಷ ಮಾರುವಂತಿಲ್ಲ ಎಂಬ ಷರತ್ತಿರಲಿ.
5. ಕೃಷಿ ಭೂಮಿಯಲ್ಲಿ ರೈತರಿಗೆ ಮನೆ, ಕೊಟ್ಟಿಗೆ, ಕೃಷಿ ಸಂಸ್ಕರಣಾ ಘಟಕ, ಗೋದಾಮು, ಹೋಮ್ ಸ್ಟೇ (ಪ್ರವಾಸಿ ಗೃಹ), ಇಂತಹ ಕೃಷಿ ಪೂರಕ ಘಟಕಗಳನ್ನು ನಿರ್ಮಿಸಲು ಕಂದಾಯ ಇಲಾಖೆ ಅನುಮತಿ ಅಗತ್ಯ ಇರಕೂಡದು. ಒಂದು ಎಕರೆಗಿಂತ ಹೆಚ್ಚಿನ ಜಾಗದಲ್ಲಿ ಘಟಕಗಳು ಬಂದಲ್ಲಿ ತಹಶೀಲ್ದಾರ್ ಅಥವಾ ಜಿಲ್ಲಾಧಿಕಾರಿಗಳು ಅನುಮತಿ ಅಗತ್ಯ ಎಂದು ನಮೂದಿಸಬೇಕು.
6. ಟ್ರಸ್ಟ್, ಕಂಪನಿ, ರಾಜ್ಯದ / ಕೇಂದ್ರದ ಬಹುರಾಜ್ಯ ಸಹಕಾರಿ ಕಾಯ್ದೆಗಳಲ್ಲಿ ನೋಂದಣಿ ಮಾಡುವ ಸಂಸ್ಥೆಗಳು ರೈತರಿಂದ ಭೂಮಿ ಖರೀದಿಸುವಾಗ ಖರೀದಿಸುವವರ ಪೂರ್ತಿ ವಿವರ ಮತ್ತು ಖರೀದಿಸುವ ಉದ್ದೇಶ ಮಾರುವ ರೈತರಿಗೆ ತಿಳಿಯುವಂತಾಗಬೇಕು.
7.ಪ್ಲಾಂಟೇಶನ್ ಕಾಯ್ದೆ ಅಡಿಯಲ್ಲಿ ಸಾವಿರಾರು ಎಕರೆ ಭೂಮಿ ಹೊಂದಲು ಅವಕಾಶವಿದೆ ಹಾಗಾಗಿ ಕಾಯ್ದೆಯನ್ನು ಮರುಪರಿಶೀಲಿಸಬೇಕು.
8.ನೀರಾವರಿ ಕಲ್ಪಿಸಲಾಗಿದೆ ಸರ್ಕಾರ ಸಾವಿರಾರು ಕೋಟಿ ಹಣ ಖರ್ಚು ಮಾಡಿದೆ, ಈಗ ಅದೇ ನೀರಾವರಿ ಭೂಮಿಯನ್ನು ಕೈಗಾರಿಕೆಗಳಿಗೆ ಕೊಡಬಾರದು.
9. ಭೂ ಸುಧಾರಣಾ ಕಾಯ್ದೆಯಲ್ಲಿ ತರುವ ಮಾರ್ಪಾಡುಗಳನ್ನು ಪುರ್ವಾನ್ವಯದಿಂದ ಜಾರಿಗೊಳಿಸುವುದು ಬೇಡ.
ಹೀಗೆ ಮಾಡುವುದರಿಂದ ಸರ್ಕಾರ ಹೊಸಬರನ್ನು ಕೃಷಿ ಕ್ಷೇತ್ರಕ್ಕೆ ತರಲು ಬದ್ಧವಾಗಿದೆ. ಹಾಗೆಯೇ ರೈತರ ಹಿತ ರಕ್ಷಣೆಗೆ ಬದ್ಧವಾಗಿದೆ ಎಂಬ ಸಂದೇಶ ಸಮಾಜಕ್ಕೆ ಹೋಗುತ್ತದೆ. ಈ ಬಗ್ಗೆ ನೀವು ತುರ್ತು ಗಮನ ಹರಿಸಿ, ನಮ್ಮ ಸಲಹೆಗಳನ್ನು ಪರಿಶೀಲಿಸಿ ರಾಜ್ಯದ ರೈತ ಸಮುದಾಯದ ಪರ ನೀವು ಗಟ್ಟಿಯಾದ ನಿಲುವು ಪ್ರಕಟಿಸಬೇಕು ಎಂದು ಆಗ್ರಹಿಸಿ ಮನವಿ ಪತ್ರವನ್ನು ಸಿಎಂ ಬಿ.ಎಸ್. ಯಡಿಯೂರಪ್ಪಗೆ ಸಲ್ಲಿಕೆ ಮಾಡಲಾಯಿತು.