ಬೆಂಗಳೂರು: ಡಿ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಮಾಜಿ ಮೇಯರ್ ಬಂಧನ ಬೆನ್ನಲೇ ನಾಪತ್ತೆಯಾಗಿರುವ ಕಾರ್ಪೋರೇಟರ್ ಜಾಕೀರ್ ಹುಸೇನ್ ಪತ್ತೆಗಾಗಿ ಸಿಸಿಬಿ ವಿಶೇಷ ತಂಡ ತನ್ನ ಕಾರ್ಯವನ್ನು ಚುರುಕುಗೊಳಿಸಿದೆ.
ರಾಜಕೀಯ ವೈಷಮ್ಯಕ್ಕಾಗಿ ಜನ ಸೇರಿಸಿ ಪರೋಕ್ಷವಾಗಿ ಗಲಭೆಗೆ ಜಾಕೀರ್ ಹುಸೇನ್ ಕಾರಣನಾಗಿದ್ದ. ಈ ಸಂಬಂಧ ಸಿಸಿಬಿ ಕಳೆದ ಆಗಸ್ಟ್ನಲ್ಲಿ ನೊಟೀಸ್ ನೀಡಿ ವಿಚಾರಣೆ ನಡೆಸಿ ಜಾಕೀರ್ ಬಳಸುತ್ತಿದ್ದ ಮೊಬೈಲ್ ಜಪ್ತಿ ಮಾಡಿಕೊಂಡಿತ್ತು. ತನಿಖೆ ಪ್ರಗತಿಯಾಗುತ್ತಿದ್ದಂತೆ ಜಾಕೀರ್ ಹುಸೇನ್ ಪ್ರಕರಣದಲ್ಲಿ ಭಾಗಿಯಾಗಿರುವುದು ಖಚಿತವಾಗಿತ್ತು. ಅಷ್ಟೊತ್ತಿಗಾಗಲೇ ಎಚ್ಚೆತ್ತ ಜಾಕೀರ್ ಬಂಧನ ಭೀತಿಯಿಂದ ಕಳೆದ ಒಂದು ತಿಂಗಳಿಂದ ತಲೆಮರೆಸಿಕೊಂಡಿದ್ದ. ಸಂಪತ್ ರಾಜ್ನನ್ನು ಬಂಧಿಸಿರುವ ಸಿಸಿಬಿಯ ಮುಂದಿನ ಗುರಿ ಜಾಕೀರ್ ಬಂಧಿಸುವುದಾಗಿದೆ.
ಪುಲಿಕೇಶಿ ನಗರ ವಾರ್ಡಿನ ಕಾರ್ಪೋರೇಟರ್ ಆಗಿದ್ದ ಜಾಕೀರ್ ಹುಸೇನ್ ಗಲಭೆಕೋರರ ನಡುವೆ ವಾಟ್ಸಾಪ್ ಕರೆ ಮೂಲಕ ವಾಟ್ಸಪ್ ಕಾಲ್ ಮಾಡಿ ಗಲಭೆಗೆ ಕುಮ್ಮಕ್ಕು ನೀಡಿದ ಆಪಾದನೆ ಎದುರಿಸುತ್ತಿದ್ದಾರೆ. ತನ್ನ ಕಡೆಯಿಂದ ಒಂದು ಸಾವಿರಕ್ಕೂ ಅಧಿಕ ಜನರನ್ನು ಸೇರಿಸಿ ಗಲಭೆ ನಡೆಯಲು ಕಾರಣೀಕರ್ತರಾಗಿದ್ದರು. ಹೀಗಾಗಿ ಅವರನ್ನು ಬಂಧಿಸಲು ಸಿಸಿಬಿ ವಿಶೇಷ ತಂಡದಿಂದ ಕಾರ್ಯಾಚರಣೆ ಚುರುಕುಗೊಂಡಿದೆ.