ಬೆಂಗಳೂರು: ನಿಮ್ಮ ಮನೆಯ ಮಹಡಿ ಮೇಲೆ ಹೆಚ್ಚುವರಿ ಅಂತಸ್ತು ನಿರ್ಮಾಣ ಮಾಡಬೇಕಾ?. ಆ ಹಾದಿಯನ್ನು ಸರ್ಕಾರ ಇದೀಗ ಸುಗಮಗೊಳಿಸಿದೆ. ಹೆಚ್ಚುವರಿ ಅಂತಸ್ತು ನಿರ್ಮಾಣಕ್ಕೆ ಅನುಮತಿ ನೀಡುವ ಪ್ರೀಮಿಯಂ ಫ್ಲೋರ್ ಏರಿಯಾ ರೇಷಿಯೋ ಸಂಬಂಧ ಸರ್ಕಾರ ಕರ್ನಾಟಕ ಯೋಜನಾ ಪ್ರಾಧಿಕಾರ (ತಿದ್ದುಪಡಿ) ನಿಯಮ 2021 ಅಧಿಸೂಚನೆ ಹೊರಡಿಸಿದೆ.
ನಿವೇಶನ ಮಾಲೀಕರು ಫ್ಲೋರ್ ಏರಿಯಾ ರೇಷಿಯೋ (ಎಫ್ಎಆರ್) ಆಧಾರದಲ್ಲಿ ಮನೆ ನಿರ್ಮಿಸಬೇಕು. ನಿವೇಶನದ ಅಳತೆ ಆಧರಿಸಿ ನಿರ್ಮಿಸಬಹುದಾದ ಕಟ್ಟಡದ ವಿಸ್ತೀರ್ಣ ಮತ್ತು ಅಂತಸ್ತುಗಳ ಪ್ರಮಾಣವೇ ಎಫ್‌ಎಆರ್. ನಿವೇಶನದ ವಿಸ್ತೀರ್ಣ ಮತ್ತು ಅದರ ಪಕ್ಕದ ಅಥವಾ ಸಮೀಪದ ರಸ್ತೆ ಅಗಲವನ್ನು ಆಧರಿಸಿ ಎಷ್ಟು ಮಹಡಿಗಳ ಕಟ್ಟಡ ನಿರ್ಮಿಸಬಹುದು ಎಂಬುದನ್ನು ಲೆಕ್ಕಾಚಾರ ಹಾಕಲಾಗುತ್ತದೆ.
ಎಲ್ಲ ಅಂತಸ್ತುಗಳ ಒಟ್ಟು ವಿಸ್ತೀರ್ಣವನ್ನು ನಿವೇಶನದ ವಿಸ್ತೀರ್ಣದಿಂದ ಭಾಗಿಸಿ ಎಫ್ಎಆರ್ನ್ನು ಲೆಕ್ಕಹಾಕಲಾಗುತ್ತದೆ. ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರ ನಿಗದಿಗೊಳಿಸಿರುವ ಎಫ್ಎಆರ್ ಮಿತಿಯಲ್ಲೇ ನಿವೇಶನದಾರರು ತಮ್ಮ ಮನೆಯ ಅಂತಸ್ತನ್ನು ಕಟ್ಟಬೇಕು. ಸದ್ಯ ಬೆಂಗಳೂರು ಮಾಸ್ಟರ್ ಪ್ಲಾನ್ ಪ್ರಕಾರ ಗರಿಷ್ಟ ಅನುಮೋದಿತ ಎಫ್ಎಆರ್ 3.25 ಇದೆ.
ಎಫ್ಎಆರ್ ಮಿತಿಯಿಂದ ಹೆಚ್ಚಿಗೆ ಅಂತಸ್ತನ್ನು ಕಟ್ಟಲು ಅನುಮತಿ ಇಲ್ಲ. ಇದೀಗ ಸರ್ಕಾರ ಹೆಚ್ಚುವರಿ ಅಂತಸ್ತು ನಿರ್ಮಿಸುವ ಹಾದಿ ಸುಗಮಗೊಳಿಸಲು ನಿಯಮ ರೂಪಿಸಿದೆ. ಈ ನಿಟ್ಟಿನಲ್ಲಿ ಪ್ರೀಮಿಯಂ ಎಫ್ಎಆರ್ ಜಾರಿಗೆ ತಂದಿದೆ. ಪ್ರೀಮಿಯಂ ಎಫ್ಎಆರ್ ಖರೀದಿಸುವ ನಿವೇಶನದಾರರು ಹೆಚ್ಚುವರಿ ನಿರ್ಮಾಣ ಪ್ರದೇಶದ ಮಾರ್ಗಸೂಚಿ ದರದ 50% ಮೊತ್ತವನ್ನು ಪಾವತಿಸಬೇಕು.
ಈ ತಿದ್ದುಪಡಿ ಕಾಯ್ದೆ ಪ್ರಕಾರ ಎಲ್ಲಾ ಪಾಲಿಕೆಗಳು ಅನುಮೋದಿತ ಮಾಸ್ಟರ್ ಪ್ಲಾನ್ ವ್ಯಾಪ್ತಿ ಪ್ರದೇಶದಲ್ಲಿನ ಸಾರಿಗೆ ಮೂಲಭೂತ ಸೌಕರ್ಯ ಯೋಜನೆಗಳು ಮತ್ತು ಇತರೆ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಂದ ಪ್ರಭಾವಕ್ಕೊಳಗಾಗುವ ವಲಯಗಳಲ್ಲಿ ಹೆಚ್ಚುವರಿ ಎಫ್ಎಆರ್ ದರವನ್ನು ವಿಧಿಸಬಹುದಾಗಿದೆ. ಈ ನಿಯಮ ರಾಜ್ಯದ ಎಲ್ಲಾ ನಗರಗಳಿಗೆ ಅನ್ವಯವಾಗಲಿದೆ.
ಪ್ರೀಮಿಯಂ ಎಫ್ಎಆರ್ ಲೆಕ್ಕಾಚಾರ ಹೇಗೆ?:
- ಪ್ರೀಮಿಯಂ ಎಫ್ಎಆರ್ ಅನ್ನು ಹೆಚ್ಚುವರಿ ಭೂಮಿ ಮತ್ತು ಕಟ್ಟಡದ ಮಾರ್ಗಸೂಚಿ ಬೆಲೆ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ.
- ಒಂದು ವೇಳೆ ಕಟ್ಟಡ ನಿವೇಶನದ ಒಟ್ಟು ವಿಸ್ತೀರ್ಣ 1,000 ಚದರ ಮೀಟರ್ ಇದ್ದು, ಅನುಮೋದಿತ ಎಫ್ಎಆರ್ 2.5 ಆಗಿದ್ದರೆ, ಅದರಂತೆ ಒಟ್ಟು ಅನುಮತಿಸಲಾಗುವ ಕಟ್ಟಡ ನಿರ್ಮಾಣದ ಪ್ರದೇಶ 2,500 ಚ.ಮೀಟರ್ ಆಗಿರಲಿದೆ.
- ಪ್ರೀಮಿಯಂ ಎಫ್ಎಆರ್ ನಂತೆ ಅನುಮತಿಸಲಾಗುವ ಹೆಚ್ಚುವರಿ ಎಫ್ಎಆರ್- 1.0
- 1.0 ಪ್ರೀಮಿಯಂ ಎಫ್ಎಆರ್ ನಡಿ ಅನುಮತಿಸಲಾಗುವ ಹೆಚ್ಚವರಿ ನಿರ್ಮಾಣ ಪ್ರದೇಶ-1000 ಚ.ಮೀಟರ್
- ನಿವೇಶನದ ಮಾರ್ಗಸೂಚಿ ಬೆಲೆ 50,000 ರೂ.
- ಪ್ರೀಮಿಯಂ ಎಫ್ಎಆರ್ ಲೆಕ್ಕ ಹಾಕಲು ಪರಿಗಣಿಸಲಾಗುವ ಹೆಚ್ಚುವರಿ ನಿವೇಶನ ಪ್ರದೇಶ- 1000ಚ.ಮೀ÷2.5(Total sital area÷FAR)= 400 ಚ.ಮೀ.
ಪ್ರೀಮಿಯಂ ಎಫ್ಎಆರ್ ದರ ಲೆಕ್ಕ ಹೇಗೆ?:
- ಹೆಚ್ಚುವರಿ ನಿವೇಶನ ಪ್ರದೇಶದ ಮಾರ್ಗಸೂಚಿ ಬೆಲೆ- 50,000× 400ಚ.ಮೀ= 2 ಕೋಟಿ ರೂ.
- 50% ಹೆಚ್ಚುವರಿ ನಿವೇಶನ ಪ್ರದೇಶ ಬೆಲೆಯಂತೆ ಪ್ರೀಮಿಯಂ ಎಫ್ಎಆರ್ ದರ= 1 ಕೋಟಿ ರೂ. (2 ಕೋಟಿ×50%)
- ಪ್ರತಿ ಚದರ ಮೀಟರ್ಗೆ ಪ್ರೀಮಿಯಂ ಎಫ್ಎಆರ್ ದರ= 10,000 ರೂ.