ಬೆಂಗಳೂರು: 2023ರ ವಿಶ್ವಕಪ್ನ ಮಹತ್ವ ಪಂದ್ಯಕ್ಕೆ ನಾಳೆ (ಶನಿವಾರ) ಚಿನ್ನಸ್ವಾಮಿ ಸ್ಟೇಡಿಯಂ ಸಾಕ್ಷಿಯಾಗಲಿದೆ. ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವೆ ಸೆಮಿಫೈನಲ್ ಭರ್ಜರಿ ಪೈಪೋಟಿ ಏರ್ಪಡಲಿದೆ. ಮಹತ್ವದ ಪಂದ್ಯ ವಾರಾಂತ್ಯದಲ್ಲಿ ನಡೆಯುತ್ತಿರುವುದರಿಂದ ಪ್ರೇಕ್ಷಕರು ಅಧಿಕ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಈ ವೇಳೆ ಸಂಚಾರಕ್ಕೆ ಸಮಸ್ಯೆ ಆಗದಂತೆ ಎಚ್ಚರ ವಹಿಸುವ ಹಿನ್ನೆಲೆಯಲ್ಲಿ ವಾಹನ ನಿಲುಗಡೆಗೆ ಬದಲಿ ವ್ಯವಸ್ಥೆ ಮಾಡಲಾಗಿದೆ.
ನಾಳೆ ಬೆಳಗ್ಗೆ 7 ಗಂಟೆಯಿಂದ ರಾತ್ರಿ 11ರವರೆಗೆ ಕೆಲ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ ಮಾಡಲಾಗಿದೆ. ಕ್ವೀನ್ಸ್ ರಸ್ತೆ, ಎಂ.ಜಿ.ರಸ್ತೆ, ರಾಜಭವನ ರಸ್ತೆ, ಸೆಂಟ್ರಲ್ ಸ್ಟ್ರೀಟ್, ಕಬ್ಬನ್ ರಸ್ತೆ, ಸೆಂಟ್ ಮಾರ್ಕ್ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರ ಬಾ ರಸ್ತೆ, ಬಿ.ಆರ್. ಅಂಬೇಡ್ಕರ್ ರಸ್ತೆ, ಲ್ಯಾವೆಲ್ಲಿ ರಸ್ತೆ, ವಿಠಲ್ ಮಲ್ಯ ರಸ್ತೆ, ನೃಪತುಂಗ ರಸ್ತೆಗಳಲ್ಲಿ ವಾಹನ ನಿಷೇಧಿಸಲಾಗಿದೆ. ಸಾರ್ವಜನಿಕ ವಾಹನ ನಿಲುಗಡೆ ಸ್ಥಳಗಳಲ್ಲಿ ಪೇ ಪಾರ್ಕ್ ವ್ಯವಸ್ಥೆ ಮಾಡಲಾಗಿದೆ.
ಕಿಂಗ್ ರಸ್ತೆ, ಯುಬಿ ಸಿಟಿ ಪಾರ್ಕಿಂಗ್ ಸ್ಥಳ, ಶಿವಾಜಿನಗರ ಬಿಎಂಟಿಸಿ ಬಸ್ ನಿಲ್ದಾಣದ ಮೊದಲನೇ ಮಹಡಿಗಳಲ್ಲಿ ವಾಹನ ನಿಲ್ದಾಣಕ್ಕೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಮ್ಯಾಚ್ ನಡೆಯುವಾಗ ಕ್ರೀಡಾಂಗಣದ ಸುತ್ತಮುತ್ತಲು ಅಹಿತಕರ ಘಟನೆ ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ.
ಚಿನ್ನಸ್ವಾಮಿಯಲ್ಲಿ ಮೂರನೇ ಪಂದ್ಯ: ಬೆಂಗಳೂರಿನ ಮೈದಾನದಲ್ಲಿ ನಡೆಯುತ್ತಿರುವ 2023ರ ವಿಶ್ವಕಪ್ನ ಮೂರನೇ ಪಂದ್ಯ ಇದಾಗಿದೆ. ಪಾಕಿಸ್ತಾನಕ್ಕೆ ಈ ಮೈದಾನದಲ್ಲಿ ಎರಡನೇ ಪಂದ್ಯ ಇದು. ಅಕ್ಟೋಬರ್ 20 ರಂದು ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡ ಇಲ್ಲಿ ಮುಖಾಮುಖಿ ಆಗಿತ್ತು. ಆಸ್ಟ್ರೇಲಿಯಾ ನೀಡಿದ್ದ 367 ರನ್ನ ಬೃಹತ್ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ 305 ಆಲ್ಔಟ್ ಆಗಿ ಸೋಲು ಕಂಡಿತ್ತು. ಅಕ್ಟೋಬರ್ 26 ರಂದು ಶ್ರೀಲಂಕಾ ಮತ್ತು ಹಾಲಿ ಚಾಂಪಿಯನ್ ಇಂಗ್ಲೆಂಡ್ ಮುಖಾಮುಖಿ ಆಗಿದ್ದು, ಆಂಗ್ಲರು ಕೊಟ್ಟಿದ್ದ 156 ರನ್ನ ಸಂಕ್ಷಿಪ್ತ ಗುರಿಯನ್ನು ಸಿಂಹಳೀಯರು 8 ವಿಕೆಟ್ನಿಂದ ಗೆದ್ದುಕೊಂಡಿದ್ದರು.
ಪಾಕ್ ಮತ್ತು ಕಿವೀಸ್ಗೆ ಮಾಡಿ ಇಲ್ಲವೇ ಮಡಿ ಪಂದ್ಯ: 7 ಮ್ಯಾಚ್ಗಳಲ್ಲಿ 4 ಗೆದ್ದ ನ್ಯೂಜಿಲೆಂಡ್ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದರೆ, 7 ರಲ್ಲಿ 3 ಗೆಲುವು ಕಂಡಿರುವ ಪಾಕಿಸ್ತಾನ 6ನೇ ಸ್ಥಾನದಲ್ಲಿದೆ. ಪಾಕಿಸ್ತಾನ ನಾಳೆ ಸೋಲು ಕಂಡಲ್ಲಿ ಟೂರ್ನಿಯಿಂದ ಹೊರಬೀಳಲಿದೆ. ಕಿವೀಸ್ಗೆ ನಾಲ್ಕನೇ ಸ್ಥಾನ ಭದ್ರ ಪಡಿಸಿಕೊಳ್ಳಲು ಈ ಗೆಲುವು ಅನಿವಾರ್ಯ.
ಇದನ್ನೂ ಓದಿ: ಈಡನ್ ಗಾರ್ಡನ್ಸ್ ಟಿಕೆಟ್ ಹಗರಣ: 'ಬುಕ್ ಮೈ ಶೋ' ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ ಕೋಲ್ಕತ್ತಾ ಪೊಲೀಸರು