ಬೆಂಗಳೂರು: ಮುತ್ತಪ್ಪ ರೈ ಅವರು ಸಾವನ್ನಪ್ಪಿದ್ದರೂ ತಮ್ಮ ಜೊತೆ ಕೆಲಸ ಮಾಡಿದವರ ಬಾಳಿನಲ್ಲಿ ಬೆಳಕಾಗಿದ್ದಾರೆ. ರೈ ಜೊತೆ ಇದ್ದ ಮನೆ ಕೆಲಸಗಾರರು, ತೋಟದ ಕೆಲಸಗಾರರು, ಕಾರು ಚಾಲಕರು ಹಾಗೂ ಗನ್ ಮ್ಯಾನ್ಗಳ ಪಾಲಿಗೆ ಹಾಗೂ ತನ್ನ ಇಬ್ಬರು ಮಕ್ಕಳು ಹಾಗೂ ಕುಟುಂಬಸ್ಥರಿಗೆ 41 ಪುಟಗಳ ವಿಲ್ನಲ್ಲಿ ಆಸ್ತಿಯನ್ನು ಬರೆದಿದ್ದಾರೆ ಎಂದು ಮುತ್ತಪ್ಪ ರೈ ಪರ ವಕೀಲರಾದ ನಾರಾಯಣ ಸ್ವಾಮಿ ಮಾಹಿತಿ ನೀಡಿದ್ದಾರೆ.
ಮುತ್ತಪ್ಪ ರೈ ಬರೆದಿರುವ 41 ಪುಟಗಳ ವಿಲ್ನಲ್ಲಿ ಏನಿದೆ..?
ಮುತ್ತಪ್ಪ ರೈ ಬದುಕಿರುವಾಗಲೇ ಕ್ರೈಂ ಚಟುವಟಿಕೆ ಬಿಟ್ಟು ಹಲವಾರು ಸಮಾಜ ಸೇವೆಯಲ್ಲಿ ತೊಡಗಿದ್ದರು. ಈ ವೇಳೆ, ತನ್ನ ಜೊತೆಗೆ ಇದ್ದವರಿಗೆ ಯಾರಿಗೆ ಎಷ್ಟು ಆಸ್ತಿ ಕೊಡಬೇಕು. ಸೈಟ್ ಹಾಗೂ ಮನೆಗಳು ಯಾರಿಗೆ..? ಸಂಘಟನೆ ಜವಾಬ್ದಾರಿ ಯಾರಿಗೆ ಹಾಗೆ ನಂಬಿಕೆಯಿಂದ ಕೆಲಸ ಮಾಡಿದ್ದ 25 ಕೆಲಸಗಾರರ ಹೆಸರನ್ನೂ ವಿಲ್ನಲ್ಲಿ ಉಲ್ಲೇಖ ಮಾಡಿದ್ದಾರೆ. ಈ 25 ಜನರಿಗೆ ಸೈಟ್ಗಳನ್ನು ಕೊಡಬೇಕು ಎಂದು ಆ ಜವಾಬ್ದಾರಿಯನ್ನು ಮಗ ರಿಕ್ಕಿರೈ ಗೆ ನೀಡಿದ್ದಾರೆ.
ಮುತ್ತಪ್ಪ ರೈಗೆ ಎಲ್ಲೆಲ್ಲಿ ಆಸ್ತಿ ಇದೆ..? ಬೆಂಗಳೂರು ಸುತ್ತಮುತ್ತ ಆಸ್ತಿ ಎಷ್ಟು..? ಮಂಗಳೂರಿನಲ್ಲಿ ಇರುವ ಆಸ್ತಿ ಎಷ್ಟು..?
ಮುತ್ತಪ್ಪ ರೈ ಬರೆದಿರುವ ವಿಲ್ ಪ್ರಕಾರ ಅವರ ಹೆಸರಿನಲ್ಲಿ 1,500 - 2,000 ಕೋಟಿ ಇದೆ. ರಾಜ್ಯದಲ್ಲಿ ಸುಮಾರು 600ಕ್ಕೂ ಹೆಚ್ಚು ಎಕರೆ ಜಮೀನು ಮುತ್ತಪ್ಪ ರೈ ಹೆಸರಿನಲ್ಲಿ ಇದೆ. ಸಕಲೇಶಪುರದಲ್ಲಿ 150 - 200 ಎಕರೆ ಜಮೀನು, ದೇವನಹಳ್ಳಿ, ಯಲಹಂಕ, ಬಿಡದಿಯಲ್ಲಿ 150ಕ್ಕೂ ಅಧಿಕ ಎಕರೆ ಜಾಗ, ಮೈಸೂರು, ಮಂಗಳೂರು, ಬಂಟ್ವಾಳ, ಪುತ್ತೂರಿನಲ್ಲಿ ನೂರಾರು ಎಕರೆ ಜಾಗ ಇದೆ ಎನ್ನಲಾಗಿದೆ.
ಸಕಲೇಶಪುರ, ಬಿಡದಿ, ಯಲಹಂಕ ಹಾಗೂ ದೇವನಹಳ್ಳಿ ಜಾಗವನ್ನು ಚಿಕ್ಕ ಮಗ ರಿಕ್ಕಿರೈ ಹೆಸರಿಗೆ ಬರೆದಿದ್ದು, ಮೈಸೂರು, ಬಂಟ್ವಾಳ, ಮಂಗಳೂರು ಹಾಗೂ ಪುತ್ತೂರಿನ ಜಾಗ ದೊಡ್ಡ ಮಗ ರಾಖಿ ರೈಗೆ ಹಾಗೆ ಬಿಡದಿ ಹಾಗೂ ಸದಾಶಿವನಗರದ ಎರಡೂ ಮನೆಗಳು ಚಿಕ್ಕ ಮಗ ರಿಕ್ಕಿ ರೈಗೆ, ಟ್ರೇಡಿಂಗ್ ಬಿಸಿನೆಸ್ ಕಂಪನಿಯನ್ನು ದೊಡ್ಡ ಮಗ ರಾಖಿ ನೋಡಿಕೊಳ್ಳುವಂತೆ ವಿಲ್ನಲ್ಲಿ ತಿಳಿಸಿದ್ದಾರೆ ಎಂದು ರೈ ಅವರ ವಕೀಲರು ತಿಳಿಸಿದ್ದಾರೆ.
ಹೀಗಾಗಿ ಇಬ್ಬರು ಮಕ್ಕಳಿಗೂ ಬಹುತೇಕ ಒಂದು ಸಾವಿರ ಕೋಟಿಯಷ್ಟು ಆಸ್ತಿ ಬರಲಿದೆ. ಹಾಗೆ ಜಯ ಕರ್ನಾಟಕ ಸಂಘಟನೆಯ ಜವಾಬ್ದಾರಿ ಚಿಕ್ಕ ಮಗ ರಿಕ್ಕಿಗೆ ಹೇಳಿದ್ದು ರೈ ಸಂಘಟನೆ ಯಾವುದೇ ಕಾರಣಕ್ಕೂ ಒಡೆಯದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಸಂಘಟನೆಯ ಅಧ್ಯಕ್ಷತೆ ಜಗದೀಶ್ ನೋಡಿಕೊಳ್ಳುವಂತೆ ವಿಲ್ ನಲ್ಲಿ ಉಲ್ಲೇಖ ಮಾಡಿ ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಬೆಳೆಸುವಂತೆ ಕಾರ್ಯಕರ್ತರಿಗೆ ವಿಲ್ನಲ್ಲಿ ತಿಳಿಸಿದ್ದಾರೆ.
ಮುತ್ತಪ್ಪ ರೈ ಮೊದಲ ಹೆಂಡತಿ ಸಾವನ್ನಪ್ಪಿದ್ದು, ಎರಡನೇ ಮದುವೆಯಾಗಿದ್ದಾರೆ. ಹೀಗಾಗಿ ಎರಡನೇ ಹೆಂಡತಿ ಅನುರಾದ ಲೈಫ್ ಸೆಟಲ್ ಮಾಡಿದ್ದಾಗಿ ತಿಳಿಸಿದ್ದಾರೆ. ಎರಡನೇ ಹೆಂಡತಿಗೆ ಹೆಚ್ಡಿ ಕೋಟೆಯಲ್ಲಿ ಪ್ರಾಪರ್ಟಿ, ಚಿನ್ನಾಭರಣ, ಐಷಾರಾಮಿ ಕಾರು, ಕೊಟ್ಯಂತರ ರೂ. ಹಣ ಸಹಕಾರ ನಗರದಲ್ಲಿ ಎರಡು ಅಂತಸ್ತಿನ ಕಟ್ಟಡ ಕಟ್ಟಿಸಿಕೊಟ್ಟಿದ್ದು ಎರಡನೇ ಹೆಂಡತಿ ಜೊತೆಗಿದ್ದ ಟೈಂನಲ್ಲಿಯೇ ಅವರಿಗೆ ಸೇರಬೇಕಾದದ್ದು ನೀಡಿರೋದಾಗಿ ವಿಲ್ನಲ್ಲಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ.
ಸಾವಿರಾರು ಕೋಟಿ ರೂ. ವಿದೇಶದಲ್ಲಿ ಆಸ್ತಿ ಇದೆ ಎನ್ನುವುದು ಸುಳ್ಳು, ತನ್ನ ಮಗನ ವ್ಯವಹಾರ ಬಿಟ್ಟರೆ ರೈಗೆ ವಿದೇಶದಲ್ಲಿ ಯಾವುದೇ ವ್ಯವಹಾರ ಇಲ್ಲ ಎಂದು ವಿಲ್ ಮಾಡಿದ ಮುತ್ತಪ್ಪ ರೈ ಅಡ್ವೋಕೇಟ್ ನಾರಾಯಣ ಸ್ವಾಮಿ ತಿಳಿಸಿದ್ದಾರೆ.