ಬೆಂಗಳೂರು: ಗುಜರಾತ್ ಚುನಾವಣೆ ಬಳಿಕ ಕರ್ನಾಟಕದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಗೆಲ್ಲಲು ಯಾವೆಲ್ಲ ತಂತ್ರಗಳನ್ನು ಮಾಡುತ್ತಿದೆ ಅನ್ನೋದು ಗೊತ್ತಿದೆ. ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಇದೆ ಅನ್ನುವುದನ್ನೇ ಎಲ್ಲರೂ ಮರೆತಿದ್ದಾರೆ, ಆದರೂ ನನಗೆ ಬೇಸರ ಇಲ್ಲ. ಬರುವ ದಿನಗಳಲ್ಲಿ ಜೆಡಿಎಸ್ ತನ್ನ ಶಕ್ತಿ ಎಂಥದ್ದು ಎಂಬುದನ್ನು ತೋರಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಚಾಮರಾಜಪೇಟೆ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದರಾಜು ಹಾಗೂ ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಗೌರಮ್ಮ, ಮಾಜಿ ಉಪಮೇಯರ್ ರಾಮೇಗೌಡ, ಶಿಕಾರಿಪುರದ ಮಾಜಿ ಶಾಸಕರು ಸೇರಿದಂತೆ 53 ಕ್ಕೂ ಹೆಚ್ಚು ಸ್ಥಳೀಯ ಮುಖಂಡರ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಂಚರತ್ನ ರಥಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಧ್ಯರಾತ್ರಿ 2 ಗಂಟೆಗೆ ಜನ ಸೇರಿ ಸ್ವಾಗತ ಕೋರುತ್ತಿದ್ದಾರೆ. ಬೆಂಗಳೂರಿನಲ್ಲಿ ಕೂಡ ಜೆಡಿಎಸ್ ಅನೇಕ ಕ್ಷೇತ್ರ ಗೆಲ್ಲುವ ನಿರೀಕ್ಷೆ ಇದೆ ಎಂದರು.
ಪೋಲಿಸ್ ಇಲಾಖೆಯಿಂದ ಜನರಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ಇದೆ. ಬೆಂಗಳೂರು ನಗರದಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿಗಿಂತ ಅತಿ ಹೆಚ್ಚು ಕ್ಷೇತ್ರ ಗೆಲ್ಲುವ ಭರವಸೆಯಿದೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಆಂತರಿಕ ಸಮೀಕ್ಷೆಗಳಲ್ಲೆ ಜೆಡಿಎಸ್ 50 ಸ್ಥಾನ ತಲುಪುತ್ತದೆ ಅಂತ ಬರ್ತಿದೆ. 50 ಕ್ಷೇತ್ರ ಮಾತ್ರವಲ್ಲ, ಜೆಡಿಎಸ್ 123 ಕ್ಷೇತ್ರ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಾಮರಾಜಪೇಟೆ ಹಿಂದೆ ಯಾವ ತರ ಇತ್ತು ಮತ್ತು ಬಳಿಕ ದೇವೇಗೌಡರು ಯಾವ ತರ ಶ್ರಮ ಹಾಕಿದ್ರು ಅದಕ್ಕೆಲ್ಲಾ ಒಂದು ಇತಿಹಾಸವಿದೆ. ಈಗ ಮತ್ತೊಮ್ಮೆ ಜೆಡಿಎಸ್ ಅಲ್ಲಿ ಗೆಲ್ಲಬೇಕು. ಹಣ ಹಂಚೋದು ದೊಡ್ಡದಲ್ಲ. ಆದರೆ ಆ ಹಣ ಹೇಗೆ ಸಂಗ್ರಹ ಆಗಿದೆ ಅದನ್ನು ಗಮನಿಸಬೇಕು ಎಂದು ಶಾಸಕ ಜಮೀರ್ ಅಹ್ಮದ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಚಾಮರಾಜಪೇಟೆ ಜೆಡಿಎಸ್ ಪಾಲು : ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಚಾಮರಾಜಪೇಟೆ ಜೆಡಿಎಸ್ ಗೆಲ್ಲುವ ಮೊದಲ ಕ್ಷೇತ್ರ ಆಗಲಿದೆ. ಚಾಮರಾಜಪೇಟೆಯಲ್ಲಿ ಹೊಸ ಪರಿವರ್ತನೆ ತರಬೇಕಾಗಿದೆ. ಇಲ್ಲಿ ಏನೇನೋ ನಡೆಯುತ್ತಿದೆ ಅನ್ನೋದು ನನಗೆ ಗೊತ್ತಿದೆ. ಚಾಮರಾಜಪೇಟೆ ಒಗ್ಗಟ್ಟಿನ ಕ್ಷೇತ್ರ. ಪಕ್ಷ ಅಂತಿಮವಾಗಿ ಏನು ನಿರ್ಧಾರ ಮಾಡುವುದೋ ಅದನ್ನು ಸ್ಥಳೀಯ ನಾಯಕರು ಒಪ್ಪಬೇಕಾಗುತ್ತದೆ ಎಂದು ಸಲಹೆ ನೀಡಿದರು.
ಪಾಪದ ಕೊಡ ತುಂಬಿದಾಗ ಶಕ್ತಿ ಕೊಡುವುದಕ್ಕೆ ದೇವರ ಕೃಪೆ ಬೇಕು. ಆ ಪಶ್ಚಾತ್ತಾಪ ಪಡುವುದಕ್ಕೆ ಸಮಯ ಬೇಕು. ಅವರನ್ನು ಎದುರಿಸುವುದಕ್ಕೆ ನಿಮ್ಮ ಶಕ್ತಿ ಸಾಕು. ನಿಮಗೆ ಪೊಲೀಸ್ ಬಿಟ್ಟು ಹೆದರಿಸಿದ್ರೆ ನನ್ನ ಗಮನಕ್ಕೆ ತನ್ನಿ, ನಾನು ನೋಡಿಕೊಳ್ಳುತ್ತೇನೆ ಎಂದು ಜಮೀರ್ ಅಹ್ಮದ್ ವಿರುದ್ಧ ಪರೋಕ್ಷವಾಗಿ ಹೆಚ್ಡಿಕೆ ಗುಡುಗಿದರು.
ಇಬ್ರಾಹಿಂ ಮಾತು: ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮಾತನಾಡಿ, ರಾಮೇಗೌಡರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂದು ಬಹಳ ದಿನದಿಂದ ಆಸೆ ಇತ್ತು. ತಾವೆಲ್ಲರೂ ಈ ಶುಭ ದಿನದ ಘಳಿಗೆಯಲ್ಲಿ ಭಾಗಿಯಾಗಿದ್ದೀರಾ. ಶಿಕಾರಿಪುರದ ಮಾಜಿ ಮಂತ್ರಿ ವೆಂಕಟಪ್ಪನವರು ಪಕ್ಷಕ್ಕೆ ಸೇರ್ಪಡೆಯಾಗ್ತಿದ್ದಾರೆ. ಇವತ್ತು ಪಕ್ಷ ಸೇರುತ್ತಿರುವವರು ಎಲ್ಲರೂ ರಾಜಕೀಯ ಅನುಭವ ಇರುವವರು ಎಂದು ಹೇಳಿದರು.
ಕೆಂಪುಕೋಟೆಯ ಮೇಲೆ ಧ್ವಜ ಹಾರಿಸಿದವರು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು. ಕುಮಾರಸ್ವಾಮಿ ಅವರು ಪಂಚರತ್ನದಂಥ ಒಳ್ಳೆ ಕೆಲಸ ಮಾಡ್ತಿದ್ದಾರೆ ಅಂದ್ರೆ ಅದು ದೇವೇಗೌಡರ ಕನಸು, ಆಶೀರ್ವಾದ ಮತ್ತು ಅವರ ಮಾರ್ಗದರ್ಶನ ಇದೆ. ನಾವು ಹೋರಾಟದ ಮೂಲಕ ಕರ್ನಾಟಕದಲ್ಲಿ ಕ್ರಾಂತಿ ಮಾಡುತ್ತಿದ್ದೇವೆ. ದೇವೇಗೌಡರು, ಕುಮಾರಸ್ವಾಮಿ ಕಷ್ಟ ಕಾಲದಲ್ಲಿದ್ದಾಗ ಎಲ್ಲಾ ಕಾರ್ಯಕರ್ತರು ಕಾಯುತ್ತಿದ್ದೀರಿ. ನಮ್ಮ ಕನಸು 123 ಕ್ಷೇತ್ರ ಗೆಲ್ಲುವುದರೊಂದಿಗೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದು. ವಿಧಾನಸೌಧದ ಎದುರು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಬೇಕು ಎಂದರು.
ಕೆಂಪೇಗೌಡ ಪ್ರತಿಮೆ ಉದ್ಘಾಟನೆಗೆ ದೇವೆಗೌಡರನ್ನು ಕರೆಯದಿದ್ದುದು ನಮಗೆಲ್ಲಾ ನೋವಾಯ್ತು. ಅಲ್ಲೆಲ್ಲೋ ಮೂಲೆಯಲ್ಲಿ ಪ್ರತಿಮೆ ಮಾಡಿದ್ದಾರೆ. ನಮ್ಮ ಸರ್ಕಾರ ಬಂದರೆ ವಿಧಾನಸೌಧದ ಎದುರು ಕೆಂಪೇಗೌಡರ ಪ್ರತಿಮೆ ಮಾಡ್ತೇವೆ. ಆ ಪ್ರತಿಮೆಯನ್ನು ದೇವೇಗೌಡರ ಕೈಯಿಂದ ಉದ್ಘಾಟನೆ ಮಾಡಿಸುತ್ತೇವೆ ಎಂದು ಘೋಷಣೆ ಮಾಡಿದರು.
ಇದನ್ನೂ ಓದಿ: ಜೆಡಿಎಸ್ ಪಂಚರತ್ನ ಯಾತ್ರೆಗೆ ಮಾಂಡೌಸ್ ಅಡ್ಡಿ.. ವೇಳಾಪಟ್ಟಿಯಲ್ಲಿ ಬದಲಾವಣೆ