ಬೆಂಗಳೂರು : ಸಚಿವ ಸ್ಥಾನದ ರೇಸ್ನಲ್ಲಿ ನಾನು ಇದ್ದೇನೆ ಎಂದು ವಿಧಾನಪರಿಷತ್ ನೂತನ ಸದಸ್ಯ ಪುಟ್ಟಣ್ಣ ಪರೋಕ್ಷವಾಗಿ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿದ ಅವರು, ನಾನು ಈ ಹಿಂದೆ ಪಕ್ಷಕ್ಕಾಗಿ ಮಾಡಿದ ಸೇವೆ ವರಿಷ್ಠರ ಗಮನದಲ್ಲಿದೆ. ಸಹಜವಾಗಿ ಸಚಿವರಾಗಲು ಎಲ್ಲರಿಗೂ ಆಸೆ ಇರುತ್ತದೆ. ನಾನು ಸತತವಾಗಿ ನಾಲ್ಕು ಬಾರಿ ವಿಧಾನಪರಿಷತ್ಗೆ ಆಯ್ಕೆಯಾಗಿ ಬಂದಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇನೆ. ಇದನ್ನು ಪರಿಗಣಿಸಿ ನನ್ನ ಬೇಡಿಕೆ ಈಡೇರುತ್ತದೆ ಎಂಬ ನಂಬಿಕೆ ಇದೆ ಎಂದರು.
ಇದು ವಿಶೇಷ ಸಂದರ್ಭ, ನಾಲ್ಕು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ನಾಲ್ವರೂ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿ ಬಂದಿದ್ದೇವೆ. ನಾನು ಕುಟುಂಬದ ಸೇವೆ (ಜೆಡಿಎಸ್) ತ್ಯಜಿಸಿ ಈಗ ಮೋದಿ ನೇತೃತ್ವದಲ್ಲಿ ದೇಶ ಸೇವೆಗೆ ಬಂದಿದ್ದೇನೆ. ಈ ಸೇವೆಯಲ್ಲಿ ಮುಂದುವರೆಯುತ್ತೇವೆ ಎಂದು ಜೆಡಿಎಸ್ ವರಿಷ್ಠರಿಗೆ ಟಾಂಗ್ ನೀಡಿದರು.
ವಿಧಾನಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಮಾತನಾಡಿ, ರಾಜ್ಯದ ಶಿಕ್ಷಕರು ಹಾಗೂ ಪದವೀಧರರು 1,972 ರಿಂದಲೂ ಬಿಜೆಪಿ ಪರವಾಗಿದ್ದಾರೆ. ದೇಶ ಮತ್ತು ರಾಜ್ಯವನ್ನು ಸುಶಿಕ್ಷಿತವಾಗಿ ಮಾಡಬೇಕು. ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕಿದೆ. ಹಾಗಾಗಿ, ಸ್ವಾವಲಂಬಿ ಭಾರತ ಕಟ್ಟಲು ನಾವೆಲ್ಲೂ ಕಟಿಬದ್ದರಾಗಿದ್ದೇವೆ ಎಂದು ಹೇಳಿದರು.