ಬೆಂಗಳೂರು: ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಅಂತಿಮಗೊಳಿಸುವ ನಿರ್ಧಾರ ಪಕ್ಷಕ್ಕೆ ಬಿಟ್ಟದ್ದು. ಪಕ್ಷದ ಮೇಲೆ ನನ್ನ ನಂಬಿಕೆ ಇದೆ ಎಂದು ಶಾಸಕ ಎನ್.ಎ.ಹ್ಯಾರಿಸ್ ಹೇಳಿದ್ದಾರೆ.
ಕುಮಾರಕೃಪಾ ಅತಿಥಿ ಗೃಹದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾರನ್ನು ಭೇಟಿಯಾಗಿ ಬಳಿಕ ಮಾತನಾಡಿದ ಅವರು, ಮಹಮದ್ ನಲಪಾಡ್ ಅತಿ ಹೆಚ್ಚು ಮತ ಪಡೆದಿದ್ದರು ಸಹ ಆಯ್ಕೆ ಅಸಿಂಧುಗೊಳಿಸಲಾಗಿತ್ತು. ಪಕ್ಷಕ್ಕೆ ಒಂದು ಸಿದ್ಧಾಂತ ಇದೆ. ನನಗೆ ಪಕ್ಷ ಹಾಗೂ ಪಕ್ಷದ ನಾಯಕರ ಮೇಲೆ ನಂಬಿಕೆ ಇದೆ. ಪ್ರಜಾಪ್ರಭುತ್ವಕ್ಕೆ ಸಾಕಷ್ಟು ಬೆಂಬಲ ನೀಡುವಂತಹ ಪಕ್ಷ ಕಾಂಗ್ರೆಸ್ ಆಗಿದ್ದು, ನಿರ್ಧಾರದ ಮೇಲೆ ನಂಬಿಕೆ ಇಟ್ಟಿದ್ದೇನೆ.
ಎಐಸಿಸಿಯಿಂದ ಇದುವರೆಗೂ ಅಧಿಕೃತ ಯುವ ಕಾಂಗ್ರೆಸ್ ಅಧ್ಯಕ್ಷರ ಘೋಷಣೆ ಆಗಿಲ್ಲ. ಫೆಬ್ರುವರಿ 20ರಂದು ಕೆಲವೊಂದಿಷ್ಟು ಅಸಿಂಧು ಮತಗಳ ಮರು ಎಣಿಕೆಗೆ ರಕ್ಷಾ ರಾಮಯ್ಯ ಮನವಿ ಮಾಡಿದ್ದಾರೆ. ಅದು ಆಗುವವರೆಗೂ ಅಧಿಕೃತವಾಗಿ ಏನನ್ನು ಹೇಳಲು ಸಾಧ್ಯವಿಲ್ಲ. ನಾನು ಸಹ ಯುವ ಕಾಂಗ್ರೆಸ್ ಪದಾಧಿಕಾರಿಯಾಗಿ ರಾಜಕೀಯದಲ್ಲಿ ಬೆಳೆದು ಈ ಸ್ಥಾನ ತಲುಪಿದ್ದೇನೆ. ಪಕ್ಷದಲ್ಲಿ ನ್ಯಾಯಯುತವಾಗಿ ಎಲ್ಲಾ ಕಾರ್ಯಗಳು ನಡೆಯಲಿದ್ದು, ನಮಗೆ ಒಳ್ಳೆಯ ಸುದ್ದಿ ಸಿಗಲಿದೆ ಎಂಬ ವಿಶ್ವಾಸ ಇದೆ ಎಂದರು.