ಬೆಂಗಳೂರು: ಖಾಸಗಿ ಅನುದಾನ ರಹಿತ ಹಾಗೂ ಅನುದಾನ ಸಹಿತ ಸ್ಥಳಾಂತರ ಮತ್ತು ಹಸ್ತಾಂತರವಾದ ಶಾಲಾ ಹಾಗೂ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಕುರಿತು ವಿಧಾನಪರಿಷತ್ ಸದಸ್ಯರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ.
ವಿಧಾನಪರಿಷತ್ನಲ್ಲಿ ಬಿಜೆಪಿ ಸದಸ್ಯ ಅರುಣ್ ಶಹಾಪೂರ್ ನಿಯಮ 330ರ ಅಡಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ರಾಜ್ಯ ಸರ್ಕಾರ ಈ ವಿಚಾರದಲ್ಲಿ ಅತ್ಯಂತ ಪಾರದರ್ಶಕವಾಗಿದ್ದು, ವಿಶೇಷ ಚರ್ಚೆಯನ್ನು ಇನ್ನೊಂದು ವಾರದಲ್ಲಿ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಶಿಕ್ಷಕರ ಹಿತದೃಷ್ಟಿಯಿಂದ ಈ ಹಿಂದೆ ಹಸ್ತಾಂತರ ಮತ್ತು ಸ್ಥಳಾಂತರಗೊಂಡ ಶಾಲೆಗಳಿಗೆ ಶಿಕ್ಷಣ ಕಾಯ್ದೆಗೆ ತಿದ್ದುಪಡಿ ತರುವ ಕೆಲವು ಶಿಕ್ಷಣ ಸಂಸ್ಥೆಗಳಿಗೆ ವೇತನಾನುದಾನ ನೀಡಲಾಗಿರುತ್ತದೆ. ಇದೇ ರೀತಿ ಹಸ್ತಾಂತರ ಮತ್ತು ಸ್ಥಳಾಂತರಗೊಂಡ ಶ್ರೀಕೃಷ್ಣ ಕನ್ನಡ ಮಾಧ್ಯಮ ಪ್ರೌಢಶಾಲೆಯ ವೇತನಾನುದಾನದ ಪ್ರಸ್ತಾವನೆಯನ್ನು ತಿರಸ್ಕರಿಸಿರುವುದನ್ನು ಸಂಸ್ಥೆ ಕರ್ನಾಟಕ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದೆ. ಸರ್ಕಾರದಿಂದ ರಚಿಸಲ್ಪಟ್ಟಿರುವ ನಿಯಮ ಮತ್ತು ಸುತ್ತೋಲೆಯನ್ನು ಎತ್ತಿಹಿಡಿದಿದೆ.
ಈ ಹಿನ್ನೆಲೆ ಹಸ್ತಾಂತರ ಮತ್ತು ಸ್ಥಳಾಂತರಗೊಂಡ ಶಾಲೆಗಳಿಗೆ ವೇತನಾನುದಾನ ನೀಡಲಾಗುತ್ತಿಲ್ಲ. ಕರ್ನಾಟಕ ಶಿಕ್ಷಣ ಕಾಯ್ದೆಗೆ ತಿದ್ದುಪಡಿ ತಂದು ಈ ರೀತಿಯ ಶಾಲೆಗಳಿಗೂ ವೇತನಾನುದಾನ ಕಲ್ಪಿಸುವ ಕೈಗೊಳ್ಳಲಾಗುತ್ತದೆ. ಇದಾದ ಬಳಿಕ ಹಸ್ತಾಂತರ ಮತ್ತು ಸ್ಥಳಾಂತರಗೊಂಡ ಶಾಲೆಗಳಿಗೆ ವೇತನಾನುದಾನ ಕಲ್ಪಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಪರಿಷತ್ಗೆ ಭರವಸೆ ನೀಡಿದರು. ಚರ್ಚೆಯಲ್ಲಿ ಸದಸ್ಯರಾದ ಅರುಣ್ ಶಹಾಪೂರ್, ಮರಿತಿಬ್ಬೇಗೌಡ, ಶ್ರೀಕಂಠೇಗೌಡ, ಹನುಮಂತ ನಿರಾಣಿ ಪಾಲ್ಗೊಂಡಿದ್ದರು.
ಇದನ್ನೂ ಓದಿ:ಯತ್ನಾಳ್ ವಿರುದ್ಧ ಕ್ರಮಕ್ಕೆ ಬಿಜೆಪಿ ಶಾಸಕರ ಆಗ್ರಹ... ಮುಖ್ಯಮಂತ್ರಿ ಭೇಟಿ ಮಾಡಿ ದೂರು