ಬೆಂಗಳೂರು: ಎರಡು ದಿನಗಳ ಕೊರೊನಾ ಲಸಿಕೆ ಡ್ರೈ ರನ್ ಯಾವುದೇ ಲೋಪದೋಷಗಳಿಲ್ಲದೆ ನಡೆದಿದ್ದು, ನಾಳೆ ರಾಜ್ಯಾದ್ಯಂತ ದೊಡ್ಡ ಪ್ರಮಾಣದಲ್ಲಿ ಲಸಿಕೆ ಡ್ರೈ ರನ್ ನಡೆಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಎಲ್ಲ ಜಿಲ್ಲೆಗಳಲ್ಲಿಯೂ ಕೊರೊನಾ ಲಸಿಕೆ ಡ್ರೈ ರನ್ ಮಾಡಲಿದ್ದೇವೆ. ಯಾವ ರೀತಿ ನಡೆಸಬೇಕು ಎಂದು ಕೇಂದ್ರ ಆರೋಗ್ಯ ಸಚಿವರು ವಿಡಿಯೋ ಸಂವಾದದ ಮೂಲಕ ಮಾರ್ಗದರ್ಶನ ಮಾಡಲಿದ್ದಾರೆ. ನಮ್ಮ ಸಿದ್ದತೆ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆರೋಗ್ಯ ಕೇಂದ್ರ, ಜಿಲ್ಲಾ ಆಸ್ಪತ್ರೆ ಸೇರಿ ಎಲ್ಲ ಕಡೆ ಕೊರೊನಾ ಲಸಿಕೆ ಡ್ರೈ ರನ್ ಮಾಡಲಿದ್ದೇವೆ. ಅಲ್ಲದೇ, ಖಾಸಗಿ ವ್ಯವಸ್ಥೆಯಲ್ಲಿಯೂ ನೂರು ಜನ ಉದ್ಯೋಗಿಗಳು ಕೆಲಸ ಮಾಡುವಲ್ಲಿ ಕೊರೊನಾ ಲಸಿಕೆ ನೀಡುವ ಕುರಿತು ಸ್ಪಷ್ಟ ಮಾರ್ಗಸೂಚಿಯನ್ನು ಇಂದು ಕೇಂದ್ರ ಆರೋಗ್ಯ ಸಚಿವರು ನೀಡಲಿದ್ದಾರೆ ಎಂದರು.
ಕೊರೊನಾ ಲಸಿಕೆ ಕುರಿತು ನಾವು ನಡೆಸಿದ ಡ್ರೈ ರನ್ ನಲ್ಲಿ ಯಾವುದೇ ಲೋಪದೋಷಗಳು ಆಗಿಲ್ಲ, ಎಲ್ಲವೂ ಸರಿಯಾಗಿ ನಡೆದಿದೆ. ನಮ್ಮ ಆರೋಗ್ಯ ಇಲಾಖೆ ಸಿಬ್ಬಂದಿಗೆ ಬಹಳ ಅನುಭವವಿದ್ದು, ಲಸಿಕೆ ಕೊಡುವುದು ಅವರಿಗೆ ಹೊಸತೇನಲ್ಲ. ಚುನಾವಣಾ ಕರ್ತವ್ಯದ ರೀತಿಯಲ್ಲಿ ವ್ಯಾಪಕವಾಗಿ ಲಸಿಕೆ ಕೊಡುವ ಕೆಲಸವಾಗಬೇಕು ಎಂದು ಪ್ರಧಾನಿ ಹೇಳಿದ್ದು, ಅದೇ ರೀತಿ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎಂದರು.
ಯುಕೆನಲ್ಲಿ ಕೊರೊನಾ ರೂಪಾಂತರಿ ವೈರಾಣು ಪ್ರಕರಣಗಳು ಪ್ರತಿದಿನ ಹೆಚ್ಚಾಗುತ್ತಿವೆ. ಆದರೆ ನಮ್ಮ ಜನ ಇಲ್ಲಿ ಮಾಸ್ಕ್ ಮರೆತಿದ್ದಾರೆ. ಈ ರೀತಿಯ ಉದಾಸೀನತೆ ಸರಿಯಲ್ಲ. ಪ್ರತಿಯೊಬ್ಬ ನಾಗರಿಕರು ಲಸಿಕೆ ಹಾಕಿಸಿಕೊಂಡು ಸುರಕ್ಷಿತ ಆಗುವವರೆಗೂ ಮಾಸ್ಕನ್ನು ಧರಿಸಿಕೊಳ್ಳಿ ಎಂದು ಮನವಿ ಮಾಡಿದರು.
ಫೈಜರ್ ಲಸಿಕೆ ಪಡೆದ ಎರಡು ದಿನದ ನಂತರ ಓರ್ವ ಮಹಿಳೆ ಸಾವನ್ನಪ್ಪಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ನಂತರ ಕಾರಣ ಗೊತ್ತಾಗಲಿದೆ, ಆಗ ಅದರ ವ್ಯಾಖ್ಯಾನ ಮಾಡಬಹುದು. ಇಡೀ ಜಗತ್ತಿನಲ್ಲಿ ಇದೊಂದೇ ಪ್ರಕರಣ ಕೊರೊನಾ ಲಸಿಕೆ ಕುರಿತು ವಿವಾದ ಸೃಷ್ಟಿಸಿದ್ದು, ಇದಕ್ಕೆ ಎಫ್ ಎಸ್ ಎಲ್ ವರದಿ ಉತ್ತರ ನೀಡಲಿದೆ ಎಂದರು.
ಒಟ್ಟಾರೆಯಾಗಿ ಯುಕೆಯಿಂದ ಬಂದವರ ಪೈಕಿ ಇಲ್ಲಿಯವರೆಗೆ ಬೆಂಗಳೂರಿನಲ್ಲಿ 112 ಜನ, ಇತರ ಜಿಲ್ಲೆಗಳಲ್ಲಿ 5 ಜನ ಸೇರಿ ಒಟ್ಟು 117 ಜನರು ಇನ್ನೂ ಪತ್ತೆಯಾಗಿಲ್ಲ. ವಿದೇಶಿ ಪಾಸ್ಪೋರ್ಟ್ ಹೊಂದಿರುವವರಿಂದ ಈ ಸಮಸ್ಯೆಯಾಗಿದೆ. 1,000ಕ್ಕೂ ಹೆಚ್ಚು ಜನ ಬೇರೆ ರಾಜ್ಯದವರಾಗಿದ್ದು ಆ ರಾಜ್ಯಗಳಿಗೆ ಮಾಹಿತಿ ಕೊಡಲಾಗಿದೆ, ಪತ್ತೆ ಕಾರ್ಯ ಮುಂದುವರೆದಿದೆ ಎಂದರು.
ಹಕ್ಕಿಜ್ವರದ ಕುರಿತು ಕಟ್ಟೆಚ್ಚರ ವಹಿಸುವ ಕುರಿತು ಪಶುಸಂಗೋಪನಾ ಇಲಾಖೆ ಜೊತೆ ಮಾತನಾಡಿದ್ದೇನೆ. ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಕೇರಳ ಗಡಿಭಾಗದಲ್ಲಿರುವ ನಮ್ಮ ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವಿಶೇಷ ಗಮನ ಕೊಡುವಂತೆ ಸೂಚನೆ ನೀಡಿದ್ದೇವೆ. ಪಶುಸಂಗೋಪನೆ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ, ಕಟ್ಟೆಚ್ಚರಕ್ಕೆ ಸೂಚನೆ ನೀಡಿದ್ದೇವೆ. ಇಲ್ಲಿಯವರೆಗೂ ರಾಜ್ಯದಲ್ಲಿ ಹಕ್ಕಿಜ್ವರದ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದರು.