ಬೆಂಗಳೂರು: ತನ್ವೀರ್ ಸೇಠ್ ಮೇಲೆ ಮೂರು ಬಾರಿ ಹಲ್ಲೆಯಾಗಿದೆ. ಈ ಬಗ್ಗೆ ತನಿಖೆ ಮಾಡಲು ನಾನು ಈಗಾಗಲೇ ಹೇಳಿದ್ದೇನೆ. ತನಿಖೆ ನಡೆಯುತ್ತಿರೋ ಹಿನ್ನೆಲೆ ನಾನು ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. 8ರಿಂದ 10 ದಿನಗಳಲ್ಲಿ ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ. ಘಟನೆ ಹಿಂದೆ ಎಷ್ಟೇ ದೊಡ್ಡ ಸಂಘಟನೆ ಇದ್ರೂ ನಾವು ಬಯಲಿಗೆಳೆಯುತ್ತೇವೆ ಎಂದು ಸಚಿವ ಸೋಮಣ್ಣ ಪ್ರತಿಕ್ರಿಯಿಸಿದರು.
ಶಾಂತಿ ಸುಭದ್ರತೆ ಹಾಳಾಗಿದೆ ಅನ್ನೋ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸೋಮಣ್ಣ, ಸಿದ್ದರಾಮಯ್ಯ ನಾನು ಹೋಗಿ ಬಂದ ಮೇಲೆ ಆಸ್ಪತ್ರೆಗೆ ಬಂದರು. ಸಿದ್ದರಾಮಯ್ಯ ಈ ವಿಚಾರದಲ್ಲಿ ಮಾತನಾಡುವಾಗ ತಾವು ಒಬ್ಬ ಮಾಜಿ ಸಿಎಂ ಅನ್ನೋದನ್ನ ಅರಿತು ಮಾತನಾಡಬೇಕು ಎಂದು ತಿರುಗೇಟು ನೀಡಿದರು.
ಸಿಎಂ ಸೂಚನೆ ಮೇರೆಗೆ ತನ್ವೀರ್ ಸೇಠ್ ಅವರನ್ನು ಭೇಟಿಯಾಗಿದ್ದೆ. ಅವರ ಆರೋಗ್ಯ ವಿಚಾರಿಸಿಕೊಂಡು ಬಂದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವತ್ತು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಮೂಲಕ ಅವರ ಆರೋಗ್ಯ ವಿಚಾರಣೆ ಮಾಡಿದ್ದು, ಅವರು ಆರೋಗ್ಯವಾಗಿದ್ದಾರೆ ಎಂದರು.