ಬೆಂಗಳೂರು:ಮೀಸಲಾತಿ ಉಪ ಸಮಿತಿ ಜತೆಗೆ ಎರಡು ಬಾರಿ ಸಭೆಯಾಗಿದೆ. ಅದರ ಬಗ್ಗೆ ಬಹಿರಂಗವಾಗಿ ಮಾತನಾಡುವುದಕ್ಕೆ ಆಗಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಂಗಳವಾರ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಾಲ ಕಾಲಕ್ಕೆ ಮಾಹಿತಿ ತರಿಸಿಕೊಳ್ಳುತ್ತಿದ್ದೇವೆ. ಎಷ್ಟು ಸಭೆ ಆಗುತ್ತದೆ ಎನ್ನುವದೂ ಗೊತ್ತಾಗಲ್ಲ. ರಾಜ್ಯದ ವಿವಿಧ ಸಮುದಾಯಗಳಲ್ಲೂ ಮೀಸಲಾತಿ ಬೇಕು ಎಂಬ ಬೇಡಿಕೆ ಇದೆ. ಕೆಲವು ಸಮುದಾಯಗಳು ಹಳೆಯ ಮೀಸಲಾತಿ ಇರಲಿ ಅಂತಿದ್ದಾರೆ. ಮುಂದೆ ನೋಡೋಣ ಕಾಲ ಕಾಲಕ್ಕೆ ಏನು ಬದಲಾಗುತ್ತದೆ ಎಂದು ತಿಳಿಸಿದರು.
ಮೀಸಲಾತಿ ಹೋರಾಟ ಅಗತ್ಯವಿಲ್ಲ:ಮೀಸಲಾತಿ ಕುರಿತು ಹೋರಾಟ ಮಾಡುವ ಅಗತ್ಯ ಇಲ್ಲ. ಆರಂಭದಲ್ಲಿ ಇರುವಾಗಲೇ ಹೋರಾಟಕ್ಕೆ ಇಳಿದರೆ ಹೇಗೆ?. ಜನಸಂಖ್ಯೆ ಆಧಾರದ ಮೇಲೆ ಕೊಡಿ ಅಂತ ಕೇಳುವವರು ಇದ್ದಾರೆ ಎಂದರು. ನಮ್ಮ ಇಲಾಖೆ ಕೆಳಗೆ ಇನ್ನೊಂದು ಸಂಸ್ಥೆ ಇದೆ. ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಅದು. ಕಾನೂನು, ಮಕ್ಕಳಿಗೆ ಕಾನೂನು ಪರಿಚಯ, ಶಾಸನ ರಚನೆ ಕುರಿತು ಅರಿವು ಹೀಗೆ ಅನೇಕ ವಿಚಾರಗಳನ್ನು ಪರಿಚಯ ಮಾಡ್ತಾರೆ. ಇದೊಂದು ಮಹತ್ವದ ಸರ್ಕಾರದ ಅಂಗ ಸಂಸ್ಥೆಯಾಗಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ, ತನ್ನ ಕಾರ್ಯ ಚಟುವಟಿಕೆ ಗಳನ್ನು ಪರಿಚಯಿಸುವ ಹಾಗೂ ಉಪಯುಕ್ತ ಮಾಹಿತಿ ಹೊಂದಿರುವ, ದಿನದರ್ಶಿಕೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ಸರ್ಕಾರದ ಯೋಜನೆ ಏನು?: ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯಗಳ ಮೀಸಲಾತಿ ಬೇಡಿಕೆ ಪೂರೈಸಲು ರಾಜ್ಯ ಸರ್ಕಾರ ಹೊಸದಾಗಿ 2C ಹಾಗೂ 2D ಪ್ರವರ್ಗ ಸೃಷ್ಟಿಸಲು ಬೆಳಗಾವಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿತ್ತು. ಹಿಂದುಳಿದ ವರ್ಗಗಳ ಆಯೋಗದ ವರದಿ ಆಧರಿಸಿ ಸರ್ಕಾರ ಈ ತೀರ್ಮಾನ ಕೈಗೊಂಡಿತ್ತು. 3A ನಲ್ಲಿರುವ ಒಕ್ಕಲಿಗರಿಗೆ 2C ಪ್ರವರ್ಗ ಸೃಷ್ಟಿಸಲಾಗಿದ್ದರೆ, 3B ಯಲ್ಲಿದ್ದ ಪಂಚಮಸಾಲಿ ಸೇರಿ ಲಿಂಗಾಯತರಿಗೆ 2D ಕ್ಯಾಟಗರಿ ಸೃಷ್ಟಿಸಲು ಮಹತ್ವದ ನಿರ್ಧಾರ ತೆಗೆದುಕೊಂಡಿತು.
ರಾಜ್ಯದಲ್ಲಿ EWSನ ಶೇ 10ರಷ್ಟು ಮೀಸಲಾತಿಯಲ್ಲಿ ಪ್ರತ್ಯೇಕ 2ಸಿ ಮತ್ತು 2ಡಿ ಪ್ರವರ್ಗಕ್ಕೆ ಹಂಚಲು ಸರ್ಕಾರ ನಿರ್ಧರಿಸಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರುವ ಜನರ ಸಂಖ್ಯೆಯ ಆಧಾರದಲ್ಲಿ ಅವರಿಗೆ ಮೀಸಲಾತಿ ನೀಡಿ, ಉಳಿದದ್ದನ್ನು 2C ಹಾಗೂ 2Dಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದರು. ಆದ್ರೆ ಎಷ್ಟು ಶೇಕಡಾ ಹಂಚಿಕೆ ಮಾಡಲಿದ್ದಾರೆ ಎಂದು ಸ್ಪಷ್ಟವಾಗಿ ಮಾಹಿತಿ ನೀಡಿಲ್ಲ.
ಆದರೆ ಇಡಬ್ಲ್ಯುಎಸ್ ಶೇ.10 ಮೀಸಲಾತಿಯಿಂದ ಶೇ.3ರಷ್ಟು ಪ್ರವರ್ಗ '2ಸಿ'ಗೆ, ಶೇ.4ರಷ್ಟು ಮೀಸಲಾತಿ ಪ್ರವರ್ಗ 2ಡಿಗೆ ಹಂಚಿಕೆ ಮಾಡುವ ಸಾಧ್ಯತೆ ಇದೆ . ಹಿಂದುಳಿದ ವರ್ಗಗಳ ಪ್ರವರ್ಗ 3Aಯಲ್ಲಿ (ಒಕ್ಕಲಿಗ, ರೆಡ್ಡಿ, ಬಲಿಜ, ಬಂಟ, ಕೊಡವ ಸೇರಿ 12ಜಾತಿಗಳು), ಪ್ರವರ್ಗ 3B (ವೀರಶೈವ ಮತ್ತು ಲಿಂಗಾಯತ ಸಮುದಾಯದ ಎಲ್ಲ ಉಪಜಾತಿಗಳು) ಇವೆ.
ಪಂಚಮಸಾಲಿ ಸಮುದಾಯದ ಪಾದಯಾತ್ರೆ, ಹೋರಾಟ: ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ 2ಎ ಮೀಸಲಾತಿಗಾಗಿ ಪಾದಯಾತ್ರೆ, ಹೋರಾಟಗಳು ನಡೆದಿದ್ದವು. ಹಾಗೆಯೇ ಒಕ್ಕಲಿಗರ ಸಮುದಾಯ ಕೂಡ ಮೀಸಲಾತಿ ನೀಡುವಂತೆ ಆಗ್ರಹಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾಣ ನಡೆ ಅನುಸರಿಸಿ, ಹೊಸ ಪ್ರತ್ಯೇಕ ಪ್ರವರ್ಗ ರಚಿಸಿತ್ತು.
ಇದನ್ನೂಓದಿ:ಬೇಡಿಕೆ ಪೂರೈಸದಿದ್ದರೆ ಮನೆ ಮುಂದೆ ಧರಣಿ ಕೂರುತ್ತೇವೆ: ಪಂಚಮಸಾಲಿ ಶ್ರೀಗಳ ಎಚ್ಚರಿಕೆ