ಬೆಂಗಳೂರು: ಹಿರೇನಾಗವಲ್ಲಿ ಸ್ಫೋಟ ಪ್ರಕರಣದ ಆರೋಪಿಗಳನ್ನು ರಕ್ಷಿಸುವ ಇರಾದೆ ಸರ್ಕಾರಕ್ಕೆ ಇಲ್ಲ. ಮಾಲೀಕ ಸೇರಿದಂತೆ ಕೆಲವರನ್ನು ಈಗಾಗಲೇ ಬಂಧಿಸಿ ಸಿಐಡಿ ತನಿಖೆಗೆ ಆದೇಶಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಷ್ಟಾದರೂ ಕೆಲವರು ಘಟನೆಗೆ ರಾಜಕೀಯ ಲೇಪ ಹಚ್ಚುವ, ವೈಯಕ್ತಿಕ ಆರೋಪ ಮಾಡುವ ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಉರಿವ ಮನೆಯಲ್ಲಿ ಗಳ ಹಿರಿಯುವ ಇಂತಹ ವರ್ತನೆ ಸಾರ್ವಜನಿಕ ಜೀವನದಲ್ಲಿ ಶೋಭೆ ತರುವುದಿಲ್ಲ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.
ಶಿವಮೊಗ್ಗ ಸ್ಫೋಟದ ಬಳಿಕ ಜಿಲ್ಲಾಡಳಿತದ ಜತೆ ಮೂರು ಸಭೆ ನಡೆಸಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ, ಸ್ಫೋಟಕಗಳ ಸರಬರಾಜು, ದಾಸ್ತಾನು ಮತ್ತು ಬಳಕೆ ಮೇಲೆ ಕಟ್ಟುನಿಟ್ಟು ಕ್ರಮ ತೆಗೆದುಕೊಳ್ಳುವಂತೆ ಹಾಗೂ ನಿಯಮಿತವಾಗಿ ಗಣಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ನಿರ್ದೇಶನ ನೀಡಿದ್ದೆನು. ಆ ಹಿನ್ನೆಲೆ ಅಧಿಕಾರಿಗಳು ಎಲ್ಲಾ ಕ್ವಾರಿಗಳಿಗೂ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ ಎಂದರು.
ಘಟನೆಗೆ ಕಾರಣವಾದ ಬ್ರಮರವರ್ಷಿಣಿ ಕ್ರಷರ್‌ಗೆ ಕಳೆದ 7ರಂದು ಎಸ್ಪಿ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಅದು ಸಕ್ರಮವಾಗಿ ನಡೆಯುತ್ತಿರುವ ಗಣಿ. ಆದರೆ ಸ್ಫೋಟಕಗಳ ದಾಸ್ತಾನು ಮತ್ತು ಬಳಕೆಯಲ್ಲಿ ಕಾನೂನು ಪಾಲನೆ ಮಾಡುತ್ತಿರಲಿಲ್ಲ. ಆ ಕಾರಣಕ್ಕೆ ಅದೇ ದಿನ ಕ್ವಾರಿಯನ್ನು ಸ್ಥಗಿತಗೊಳಿಸಲು ಆದೇಶಿಸಿ ದೂರು ದಾಖಲು ಮಾಡಲಾಗಿದೆ.
ಮಾತ್ರವಲ್ಲ ಮತ್ತೆ ಪರಿಶೀಲನೆಗಾಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇದರಿಂದ ಆತಂಕಕ್ಕೆ ಒಳಗಾದ ಮಾಲೀಕ ಅಕ್ರಮವಾಗಿ ದಾಸ್ತಾನು ಮಾಡಿದ್ದ ಸ್ಫೋಟಕಗಳನ್ನು ಸಮೀಪದ ಕುರುಚಲು ಕಾಡಿನಲ್ಲಿ ವಿಲೇವಾರಿ ಮಾಡಲು ಕೆಲಸಗಾರರಿಗೆ ಸೂಚನೆ ನೀಡಿದ್ದನಂತೆ, ಇದರಿಂದಾಗಿಯೇ ಅನಾಹುತ ಸಂಭವಿಸಿದೆ ಎಂದು ವಿವರಿಸಿದರು.
ಸ್ಫೋಟಕ ಬೇರೆಡೆ ಸ್ಥಳಾಂತರಿಸುವಾಗ ಘಟನೆ
ಪ್ರಾಥಮಿಕ ತನಿಖೆಯಲ್ಲಿ ಸ್ಫೋಟಕಗಳನ್ನು ಕ್ವಾರಿಯಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಕೊಠಡಿಯೊಂದರಲ್ಲಿ ಇರಿಸಿದ್ದ ಅಂಶ ಗೊತ್ತಾಗಿದೆ. ಪೊಲೀಸರ ದಾಳಿ ಬಳಿಕ ಹೆದರಿದ ಮಾಲೀಕರು ಅದನ್ನು ಸಮೀಪದ ಕಾಡಿನಲ್ಲಿ ಬಿಸಾಡುವಂತೆ ಹೇಳಿದ್ದರಿಂದ ಸಿಬ್ಬಂದಿ ಅದನ್ನು ತೆಗೆದುಕೊಂಡು ಘಟನೆ ನಡೆದ ಸ್ಥಳಕ್ಕೆ ತೆರಳಿದ್ದಾರೆ.
ಕ್ಯಾಂಪ್‌ಫೈರ್ ಮಾದರಿಯಲ್ಲಿ ಬೆಂಕಿ ಹಚ್ಚಿಕೊಂಡು ಅಲ್ಲೇ ಎಲ್ಲರೂ ಮದ್ಯ ಸೇವಿಸಿ ಪಾರ್ಟಿ ಮಾಡಿದ್ದಾರೆ. ಬಳಿಕ ಸ್ಫೋಟಕಗಳನ್ನು ಅದೇ ಬೆಂಕಿಗೆ ಎಸೆದಿದ್ದಾರೆ. ಅದರಿಂದ ಅನಾಹುತ ಸಂಭವಿಸಿತು ಎಂದು ಬದುಕುಳಿದಿರುವ ಚಾಲಕ ನೀಡಿರುವ ಹೇಳಿಕೆ ಮತ್ತು ಸ್ಥಳ ಪರಿಶೀಲನೆ ನಡೆಸಿದ ತಜ್ಞರು ನೀಡಿದ ಮಾಹಿತಿಯಿಂದ ಬೆಳಕಿಗೆ ಬಂದಿದೆ ಎಂದರು.
ಇದನ್ನೂ ಓದಿ: ಮೀನುಗಾರರಿಗೆ ಬ್ಯಾಟರಿ ಚಾಲಿತ ಬೋಟ್ ನೀಡಲು ಚಿಂತನೆ : ಸಚಿವ ಎಸ್. ಅಂಗಾರ