ಬೆಂಗಳೂರು: ನಗರದಲ್ಲಿ ನಿನ್ನೆ ತಡರಾತ್ರಿ 30 ನಿಮಿಷಗಳಲ್ಲಿ 43 ಮಿ.ಮೀ. ನಷ್ಟು ಮಳೆ ಸುರಿದಿದೆ. ಐಎಂಡಿಯ ಸ್ವಯಂಚಾಲಿತ ಹವಾಮಾನ ಕೇಂದ್ರವು ಕೇವಲ 15 ನಿಮಿಷಗಳಲ್ಲಿ 31 ಮಿ.ಮೀ ಸುರಿದಿದೆ ಎಂದು ಸಾಮಾಜಿಕ ಜಾಲತಾಣದ ಪುಟದಲ್ಲಿ ದಾಖಲಿಸಿದೆ.
ಕಳೆದ ಮೂರು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ವರುಣನ ಅರ್ಭಟ ಹೆಚ್ಚಾಗಿತ್ತು. ರಾಜಧಾನಿಯಲ್ಲಿ ಸಂಜೆ ಮತ್ತು ತಡರಾತ್ರಿ ಸುರಿದ ಭಾರಿ ಮಳೆಗೆ ಗುಂಡಿಗಳಲ್ಲಿ ನೀರು ತುಂಬಿ ಸಂಪೂರ್ಣ ರಸ್ತೆ ಜಲವೃತಗೊಂಡಿತ್ತು.
ವೀಕೆಂಡ್ ಲಾಕ್ಡೌನ್ ಹಿನ್ನೆಲೆ ಬಸ್ಗಳ ಸಂಖ್ಯೆ ಕೂಡ ಗಣನೀಯವಾಗಿ ಕಡಿಮೆಯಿದ್ದು, ಜನರು ತೊಂದರೆ ಅನುಭವಿಸುವಂತಾಗಿತ್ತು. ಮೆಜೆಸ್ಟಿಕ್, ಗಾಂಧಿನಗರ, ಯಶವಂತಪುರ, ದಾಸರಹಳ್ಳಿ, ರಾಜಾಜಿನಗರ, ಬಸವೇಶ್ವರನಗರ, ವಿಲ್ಸನ್ ಗಾರ್ಡನ್, ಶಾಂತಿ ನಗರ, ಕೋರಮಂಗಲ ಸೇರಿದಂತೆ ಹಲವೆಡೆ ಮಳೆಗೆ ಕೆಲ ಹೊತ್ತು ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.
ಓದಿ: ಬೆಂಗಳೂರಿನಲ್ಲಿ ನಾಲ್ಕನೇ ದಿನವೂ ಸುರಿಯುತ್ತಿರುವ ಅಶ್ವಿನಿ ಮಳೆ: ಮುಂದಿನ 3 ದಿನವೂ ಮಳೆ ಸಾಧ್ಯತೆ
ತಡರಾತ್ರಿ ಕೂಡ ಸುಮಾರು ಒಂದು ಗಂಟೆ ಗುಡುಗು-ಮಿಂಚಿನಿಂದ ಕೂಡಿದ ಭಾರಿ ಮಳೆಯಾಗಿದೆ, ತಗ್ಗು ಪ್ರದೇಶದ ಹಲವೆಡೆ ಮಳೆ ನೀರು ನುಗ್ಗಿದೆ. ಅರಬ್ಬೀ ಸಮುದ್ರದಲ್ಲಿ ಸುಳಿಗಾಳಿ ಎದ್ದಿರುವುದರಿಂದ ನಿನ್ನೆ ಕೂಡ ರಾಜಧಾನಿಯಲ್ಲಿ ಭಾರಿ ಮಳೆ ಸುರಿದಿದೆ.
ರಾಜ್ಯದ ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಚದುರಿದ ಸಾಧಾರಣ ಹಾಗೂ ಅಲ್ಲಲ್ಲಿ ಉತ್ತಮ ಮಳೆಯಾಗುತ್ತಿದ್ದು, ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇಂದೂ ಕೂಡ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.