ಬೆಂಗಳೂರು : ವಿಜಯಪುರ ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಮದಾಪುರ ಗ್ರಾಮದ ಕಾಯ್ದಿಟ್ಟ ಅರಣ್ಯ ಪ್ರದೇಶವನ್ನು ಕಿರು ಅರಣ್ಯ ಪ್ರದೇಶವಾಗಿ ಅಭಿವೃದ್ಧಿ ಪಡಿಸಲು ಕೋರಿ ಮಾಜಿ ಸಚಿವ ಎಂ ಬಿ ಪಾಟೀಲ್ ಅವರು ಇಂದು ಅರಣ್ಯ ಸಚಿವ ಆನಂದ ಸಿಂಗ್ ಅವರನ್ನು ಭೇಟಿ ಮಾಡಿ, ವಿನಂತಿಸಿದರು.
ವಿಧಾನಸೌಧದಲ್ಲಿಂದು ಅರಣ್ಯ ಸಚಿವ ಆನಂದ ಸಿಂಗ್ ಅವರನ್ನು ಭೇಟಿ ಮಾಡಿದ ಎಂ ಬಿ ಪಾಟೀಲ್ ಅವರು, ವಿಜಯಪುರ ಜಿಲ್ಲೆಯ ಮಮದಾಪುರ ಗ್ರಾಮದ ಸರ್ವೇ ನಂ. 345ಪಿ, 390ಪಿ, 401, 347, 398 ಹಾಗೂ ಕಾಖಂಡಕಿ ಗ್ರಾಮದ ಸರ್ವೇ ನಂ.815ಪಿಗಳಲ್ಲಿ ಒಟ್ಟು 630.67 ಹೆಕ್ಟೇರ್ ಪ್ರದೇಶ ಅರಣ್ಯ ಭೂಮಿ ಇರುತ್ತದೆ. ಈ ಅರಣ್ಯ ಪ್ರದೇಶ ದಟ್ಟವಾದ ಬಳ್ಳಾರಿ ಜಾಲಿಯಿಂದ ಬೆಳೆದು ನಿಂತಿದ್ದು, ಅನುಪಯುಕ್ತವಾಗಿದೆ ಎಂದಿದ್ದಾರೆ.
ಇದನ್ನು ಓದಿ:ಚೆಟ್ಟಿನಾಡ್ ಬ್ಯುಸಿನೆಸ್ ಗ್ರೂಪ್ ಕಚೇರಿ ಮೇಲೆ ಏಕಕಾಲಕ್ಕೆ ಐಟಿ ದಾಳಿ : ಅಕ್ರಮ ನಗದು ಜಪ್ತಿ
ಉಳಿದ ಭಾಗದಲ್ಲಿ ನೆಡತೋಪು ಇದ್ದು, ಸ್ಪಲ್ಪ ಭಾಗ ಮಮದಾಪುರ ಕೆರೆ ನೀರಿನಿಂದ ಆವೃತ್ತವಾಗಿರುತ್ತದೆ. ಈ ಪ್ರದೇಶದಲ್ಲಿ ಸುತ್ತಲು ಬೇಲಿ ಅಳವಡಿಸಿ, ಅರಣ್ಯ ಅಭಿವೃದ್ಧಿ ಪಡಿಸಿದ್ರೆ, ಫಲವತ್ತಾದ ಮಣ್ಣು ಹಾಗೂ ನೀರಿನ ಸೌಕರ್ಯದಿಂದ ಇಲ್ಲಿ ಮಾದರಿ ಕಿರು ಅರಣ್ಯ ನಿರ್ಮಿಸಬಹುದು.
ಈ ಕುರಿತು ಈಗಾಗಲೇ ವಿಜಯಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು 3379.04ಲಕ್ಷ ಮೊತ್ತದ ವಿವರವಾದ ಪ್ರಸ್ತಾವನೆಯಲ್ಲಿ ಮಂಜೂರಿಗಾಗಿ ಸಲ್ಲಿಸಿದ್ದಾರೆ. ವಿಶೇಷ ಪ್ರಕರಣ ಎಂದು ಈ ಮೊತ್ತವನ್ನು ಮಂಜೂರು ಮಾಡಿ, ಮಾದರಿ ಕಿರು ಅರಣ್ಯ ನಿರ್ಮಿಸಲು ಎಂ ಬಿ ಪಾಟೀಲ್ ವಿನಂತಿಸಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.