ಬೆಂಗಳೂರು: ಸಿಸಿಬಿ ಸಹಕಾರದೊಂದಿಗೆ ಮೂವರು ಶಂಕಿತ ಉಗ್ರರನ್ನು ಈಗಾಗಲೇ ಬಂಧಿಸಲಾಗಿದ್ದು, ಇವರ ವಿಚಾರಣೆಯಿಂದ ಕೆಲವು ಸ್ಪೋಟಕ ವಿಚಾರಗಳು ಬಯಲಾಗಿದೆ.
ಅಲ್-ಉಮಾ ಸಂಘಟನೆ ಸದಸ್ಯರು, ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಸಕ್ರಿಯವಾಗಲು ಸಿದ್ಧತೆ ಮಾಡುತ್ತಿದ್ದರು ಹಾಗೂ ರಾಜ್ಯದಲ್ಲಿನ ಕೆಲ ಹಿಂದೂ ಮುಖಂಡರ ಹತ್ಯೆಗೆ ಪ್ಲಾನ್ ಮಾಡಿದ್ದಲ್ಲದೇ ಜೊತೆಗೆ ಇತ್ತೀಚೆಗೆ ಬೆಳಕಿಗೆ ಬಂದ ಪೌರತ್ವ ಕಿಚ್ಚು ಗಲಾಟೆಯನ್ನು ಬಳಸಿಕೊಂಡು ಕರ್ನಾಟಕದಲ್ಲಿ ಸರಣಿ ವಿಧ್ವಂಸಕ ಕೃತ್ಯ ಮಾಡಲು ಯೋಜನೆ ಹಾಕಿದ್ದರು ಎಂಬ ವಿಚಾರವನ್ನು ಈಗಾಗಲೇ ಬಂಧಿತರಾಗಿರುವ ಮೊಹಮ್ಮದ್ ಹನೀಫ್ ಖಾನ್(29), ಇಮ್ರಾಾನ್ ಖಾನ್(32), ಉಸ್ಮಾನ್ ಗನಿ(24) ಬಾಯ್ಬಿಟ್ಟಿದ್ದಾರೆ.
ಈ ಕೃತ್ಯದ ಮಾಸ್ಟರ್ ಮೈಂಡ್ ಯಾರು ಅನ್ನುವ ವಿಚಾರವನ್ನು ಕೂಡ ತಿಳಿಸಿದ್ದಾರೆ. ಹೀಗಾಗಿ ಸಿಸಿಬಿ ಪೊಲೀಸರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಫ್ಐಆರ್ ದಾಖಲಿಸಿ, ತಲೆಮರೆಸಿಕೊಂಡಿರುವ ಪ್ರಕರಣದ ಮಾಸ್ಟರ್ ಮೈಂಡ್ ಮೆಹಬೂಬ್ ಪಾಷಾಗೆ ಬಲೆ ಬೀಸಿದ್ದಾರೆ.
ಮೆಹಬೂಬ್ ಪಾಷಾ ಬೇರೆ ಯಾರು ಅಲ್ಲ. ಸಿಲಿಕಾನ್ ಸಿಟಿಯ ಸದ್ದುಗುಂಟೆಪಾಳ್ಯದ ನಿವಾಸಿ. ಈತ ಅಲ್ಪಸಂಖ್ಯಾತರನ್ನು ಜಿಹಾದ್ಗೆ ಸೆಳೆಯಲು ಸ್ಕೆಚ್ ಹಾಕಿದ್ದು, ಜಿಹಾದಿ ಗ್ಯಾಂಗ್ನ ಕಮಾಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನಂತೆ. ಹಾಗೆಯೇ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಐಸಿಸ್ ನೇಮಕಾತಿಗೆ ಯೋಜನೆ ಹಾಕಿ ಮೊದಲು ಸದಸ್ಯರ ನೇಮಕ ಮಾಡುತ್ತಿದ್ದ ಎನ್ನಲಾಗಿದೆ.
ಇಷ್ಟೇ ಅಲ್ಲದೆ, ಶಸ್ತ್ರ ಪೂರೈಕೆಯ ನೀಲನಕ್ಷೆ ರಚಿಸಿಕೊಂಡಿರುವ ಪಾಷ, ಬೆಂಗಳೂರು ಹೊರವಲಯ, ಮಡಿಕೇರಿಯ ಗೋಣಿಕೊಪ್ಪದ ಸುತ್ತಮುತ್ತಲಿನ ಪ್ರದೇಶ ದಟ್ಟಾರಣ್ಯವಾಗಿರೋ ಕಾರಣ ಈ ಭಾಗವನ್ನೇ ಆಯ್ಕೆ ಮಾಡಿಕೊಂಡು, ಅಲ್ಲಿ ಹೊಸದಾಗಿ ಜಿಹಾದಿಗೆ ಸೇರುವವರಿಗೆ ತರಬೇತಿ ನೀಡುತ್ತಿದ್ದ ಎಂದು ತಿಳಿದುಬಂದಿದೆ.
ಗೋಣಿಕೊಪ್ಪದಿಂದ ಬೆಂಗಳೂರಿಗೆ ಬಸ್ ವ್ಯವಸ್ಥೆ ಹಾಗೂ ವಾಹನ ಸಂಚಾರ ಅಧಿಕವಾಗಿರೋ ನಿಟ್ಟಿನಲ್ಲಿ ಈ ಭಾಗದ ಅರಣ್ಯ ಪ್ರದೇಶವನ್ನೇ ತರಬೇತಿಗೆ ಬಳಕೆ ಮಾಡಿಕೊಂಡಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.