ಬೆಂಗಳೂರು: ದೇಶದಲ್ಲಿ ಲಾಕ್ಡೌನ್ ಜಾರಿಯಾದ ದಿನದಿಂದಲೂ ರಸ್ತೆಗಳಲ್ಲಿ ವಾಹನ ಸಂಚಾರ ಸಂಪೂರ್ಣ ಇಳಿಮುಖವಾಗಿದೆ. ರಸ್ತೆಗೆ ವಾಹನಗಳು ಇಳಿಯದ ಕಾರಣ ನಗರದ ಎಲ್ಲಾ ಪೆಟ್ರೋಲ್ ಬಂಕ್ಗಳು ನಷ್ಟ ಅನುಭವಿಸುತ್ತಿವೆ.
ಮಾರ್ಚ್ 24ರಿಂದ ಅಗತ್ಯ ಸೇವೆ ವಾಹನಗಳಾದ ಆಂಬ್ಯುಲೆನ್ಸ್ , ಪೊಲೀಸ್ ವಾಹನ, ವೈದ್ಯರ ವಾಹನ, ಸ್ವಿಗ್ಗಿ ಜೊಮೊಟೋ ದಂತ ವಾಹನಗಳಿಗೆ ಮಾತ್ರ ಪೆಟ್ರೋಲ್ ಅಥವಾ ಡೀಸೆಲ್ ಪೂರೈಕೆ ಮಾಡಲಾಗುತ್ತಿದೆ ಎಂದು ಬೆಂಗಳೂರು ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಅಧ್ಯಕ್ಷ ಬಾಲಾಜಿ ಹೇಳಿದರು.
ಸಾಮಾನ್ಯ ದಿನಗಳಲ್ಲಿ 6,000 ಲೀಟರ್ ಪೆಟ್ರೋಲ್ ಮಾರಾಟ ಮಾಡಲಾಗುತ್ತಿತ್ತು. ಆದರೆ, ಲಾಕ್ಡೌನ್ ಹಿನ್ನೆಲೆಯಲ್ಲಿ ಪ್ರತಿನಿತ್ಯ 400 ರಿಂದ 500 ಲೀಟರ್ ಮಾತ್ರ ಮಾರಾಟ ಆಗುತ್ತಿದೆ ಎಂದರು.
ಇನ್ನು ಮೇ 4 ರಿಂದ ಲಾಕ್ ಡೌನ್ ಸಡಿಲಿಕೆ ಮಾಡಿದ ಕಾರಣ ದಿನಕ್ಕೆ 1000 ರಿಂದ 1200 ಲೀಟರ್ ಪ್ರತಿನಿತ್ಯ ಮಾರಾಟ ಮಾಡಲಾಗುತ್ತಿದೆ. ಲಾಕ್ ಡೌನ್ 3 ರ ಹಲವು ನಿರ್ಬಂಧಗಳನ್ನು ಸರ್ಕಾರ ಕಡಿತಗೊಳಿಸಿ, ಸ್ವಲ್ಪ ಆರ್ಥಿಕ ಪುನಶ್ಚೇತನಕ್ಕೆ ಒತ್ತು ನೀಡಿದ ಹಿನ್ನೆಲೆಯಲ್ಲಿ , ಪ್ರತಿನಿತ್ಯ ಬೆಳಗ್ಗೆ 7 ರಿಂದ ಸಂಜೆ 7 ರ ವರೆಗೆ ನಗರದ ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನೋಡಬಹುದು.