ಬೆಂಗಳೂರು: ಕೋವಿಡ್ 19 ನಿಂದಾಗಿ ಇಡೀ ದೇಶವೇ ಲಾಕ್ಡೌನ್ ಆಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಬಹಳಷ್ಟು ಕಾರ್ಮಿಕರು, ಜನರು ತತ್ತರಿಸುತ್ತಿದ್ದು, ಇವರಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನ ಬಿಬಿಎಂಪಿ, ರಾಜ್ಯ ಸರ್ಕಾರ ಹಾಗೂ ಕೆಲ ಸಂಘಟನೆಗಳು ಕೊಡ್ತಿದೆ. ಆದರೆ ಈ ಸಂದರ್ಭದಲ್ಲಿ ಸರ್ಕಾರಗಳು ಮಂಗಳಮುಖಿಯರನ್ನು ಮರೆತಿದ್ದು, ನಮ್ಮ ಕಷ್ಟವನ್ನು ಸ್ವಲ್ಪ ಆಲಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ.
ಮೊದಲೇ ಸಮಾಜದಿಂದ ನಿರ್ಲಕ್ಷ್ಯಕೊಳಪಟ್ಟ ಇವರು ಇಂತಹ ಸಂಧರ್ಭದಲ್ಲಿ ಯಾರ ಕಣ್ಣಿಗೂ ಕಾಣದಂತಾಗಿದ್ದಾರೆ. ಬೀದಿ ಬೀದಿಗಳಲ್ಲಿ, ಅಂಗಡಿ ಮುಂಗಟ್ಟುಗಳಲ್ಲಿ, ಟ್ರಾಫಿಕ್ ಸಿಗ್ನಲ್ಗಳಲ್ಲಿ ಹಣ ವಸೂಲಿ ಮಾಡುವ ಮೂಲಕ ಜೀವನ ನಡೆಸುವ ಇವರು ಇದೀಗ ಲಾಕ್ಡೌನ್ನಿಂದಾಗಿ ಒಂದೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ತಮ್ಮ ಈಗಿನ ಪರಿಸ್ಥಿತಿಯ ಬಗ್ಗೆ ಈಟಿವಿ ಭಾರತ ಜೊತೆ ಮುಂಗಳಮುಖಿಯರ ಲೀಡರ್ ಸೌಮ್ಯ ಮಾತನಾಡಿ, ನಾವು ನಗರದಲ್ಲಿ ಸಾವಿರಾರು ಮಂದಿ ಇದ್ದು ಬಾಡಿಗೆ ಕಟ್ಟಲು ಆಗದೇ ಪರದಾಡುತ್ತಿದ್ದೇವೆ. ನಮ್ಮಲ್ಲಿರುವ ಕೆಲವರು ಹೆಚ್ಐವಿ ರೋಗಿಗಳಿದ್ದು ಚಿಕಿತ್ಸೆಗೂ ಅವರನ್ನು ಕರೆದುಕೊಂಡು ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ದಯವಿಟ್ಟು ಸರ್ಕಾರಗಖು ನಮ್ಮ ಬಗ್ಗೆಯೂ ಸ್ವಲ್ಪ ಗಮನಹರಿಸಿ ಎಂದು ಮನವಿ ಮಾಡಿದರು.
ಅಲ್ಲದೇ ಇತ್ತೀಚೆಗೆ ಬಿಬಿಎಂಪಿ ಅವರಿಗೆ ಆಹಾರ ಪದಾರ್ಥದ ಕಿಟ್ ಕೊಟ್ಟಿದ್ದು ಅದರಲ್ಲಿ ಆಹಾರ ಕೂಡ ಕೊಳೆತು ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ನಮ್ಮನ್ನು ಬಹಳ ಕೀಳಾಗಿ ನೋಡ್ತಿದ್ದಾರೆ. ಈಗಾಗ್ಲೇ ಬಿಬಿಎಂಪಿ ಎರಡು ಕೋಟಿ ನಮಗಾಗಿ ಬಜೆಟ್ನಲ್ಲಿ ಇಟ್ಟಿದೆ. ಆದರೆ ಯಾವುದು ಅನ್ವಯ ಆಗಿಲ್ಲ. ಸರ್ಕಾರಗಳು ನಮ್ಮನ್ನು ಮನುಷ್ಯರ ರೀತಿ ನೋಡಿ ಪ್ರಾಣಿಗಳ ರೀತಿ ನೋಡಬೇಡಿ ನಮ್ಮ ಸಮುದಾಯ ತೀವ್ರ ಕಷ್ಟದಲ್ಲಿದೆ. ಮಾನ್ಯ ಯಡಿಯೂರಪ್ಪನವರೇ ನಮ್ಮ ಬಗ್ಗೆ ಗಮನ ಹರಿಸಿ ಎಂದು ಮನವಿ ಮಾಡಿದ್ರು.