ಬೆಂಗಳೂರು: ಚೆಕ್ಪೋಸ್ಟ್ಗಳಲ್ಲಿ ಡಿಜಿಟಲ್ ವ್ಯವಸ್ಥೆ ಜಾರಿ ಮಾಡಬೇಕು. ಆ ಮೂಲಕ ಆರ್ಟಿಒ ಅಧಿಕಾರಿಗಳಿಂದ ಆಗುವ ದೌರ್ಜನ್ಯ ಹಾಗೂ ಲೂಟಿ ನಿಲ್ಲುಬೇಕು ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ.
ಈಗಾಗಲೇ ಈ ಸಂಬಂಧ ಅಧಿಕಾರಿಗಳ ದೌರ್ಜನ್ಯಕ್ಕೆ ಬೇಸತ್ತು ಪಕ್ಕದ ಕೇರಳ ರಾಜ್ಯದಲ್ಲಿ ನಿನ್ನೆ ಸಂಪೂರ್ಣವಾಗಿ ಖಾಸಗಿ ಬಸ್ಗಳ ಸೇವೆ ಸ್ಥಗಿತಗೊಳಿಸಲಾಗಿತ್ತು. ಈಗ ಇದೇ ವಿಚಾರ ರಾಜ್ಯದಲ್ಲೂ ಕೇಳಿ ಬಂದಿದ್ದು, ನಮಗೆ ಚೆಕ್ಪೋಸ್ಟ್ಗಳಲ್ಲಿ ಡಿಜಿಟಲ್ ವ್ಯವಸ್ಥೆ ರೂಪಿಸಿಕೊಡಿ ಎಂದು ರಾಜ್ಯ ಸರ್ಕಾರಕ್ಕೆ ಪ್ರವಾಸಿ ವಾಹನ ಮಾಲೀಕರು ಮನವಿ ಮಾಡಿದ್ದಾರೆ.
ಚೇಂಬರ್ಸ್ ಆಫ್ ಕಾಮರ್ಸ್ ಮುಖಾಂತರ ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದು, ವಾರದೊಳಗೆ ಟ್ಯಾಕ್ಸಿ ಯುನಿಯನ್ನೊಂದಿಗೆ ಸಭೆ ಕರೆಯಲಾಗಿದೆ ಎಂದು ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಮಾಹಿತಿ ನೀಡಿದ್ದಾರೆ.
ರಾಜಸ್ಥಾನ, ಆಂಧ್ರ ಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಚೆಕ್ಪೋಸ್ಟ್ ಡಿಜಿಟಲೈಸ್ ಆಗಿದೆ. ಆ ರಾಜ್ಯದ ಗಡಿಭಾಗಕ್ಕೆ ಹೋಗುತ್ತಿದ್ದಂತೆ ಅಲ್ಲೇ ಹಣ ಕಟ್ಟಿದರೆ, ಎಸ್ಎಂಎಸ್ ಮೂಲಕ ಮಾಹಿತಿ ಬರಲಿದೆ. ಇದೇ ವ್ಯವಸ್ಥೆ ರಾಜ್ಯದಲ್ಲೂ ಬಂದರೆ ಸಹಾಯವಾಗಲಿದೆ ಎಂಬುದು ಚಾಲಕರ ಮನವಿ.
ಆರ್ಟಿಒ ಅಧಿಕಾರಿಗಳಿಂದ ಆಗುವ ದೌರ್ಜನ್ಯ ಹಾಗೂ ಅಕ್ರಮ ವಾಹನಗಳ ಪ್ರವೇಶ ತಡೆಗಟ್ಟಲು ಡಿಜಿಟಲ್ ವ್ಯವಸ್ಥೆ ತರುವಂತೆ ರಾಜ್ಯ ಸೇರಿದಂತೆ ಇತರೆ ರಾಜ್ಯಗಳಲ್ಲೂ ಕೂಗು ಕೇಳಿ ಬರುತ್ತಿದೆ.