ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವಕೀಲರು ನೇರವಾಗಿ ಕೋರ್ಟ್ಗೆ ಹಾಜರಾಗಿ ವಾದ ಮಂಡಿಸುವ ಬದಲು ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ಬಳಸಿಕೊಳ್ಳಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ಮನವಿ ಮಾಡಿದ್ದಾರೆ.
ಈ ಕುರಿತು ವಕೀಲ ಸಮುದಾಯದಲ್ಲಿ ಮನವಿ ಮಾಡಿರುವ ಮುಖ್ಯ ನ್ಯಾಯಮೂರ್ತಿಗಳು, ಇತ್ತೀಚೆಗೆ ವಕೀಲರಿಗೆ ಕೂಡ ಕೋವಿಡ್ ಸೋಂಕು ಹರಡುತ್ತಿದೆ.
ಹೀಗಾಗಿ ಸಾಧ್ಯವಾದಷ್ಟು ವಕೀಲರು ಹೈಕೋರ್ಟ್ ಹಾಗೂ ಇತರ ನ್ಯಾಯಾಲಯಗಳಿಗೆ ನೇರವಾಗಿ ಹಾಜರಾಗುವ ಬದಲು ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ಬಳಸಿಕೊಳ್ಳಿ ಎಂದು ಕೋರಿದ್ದಾರೆ.
ಅಲ್ಲದೇ, ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಿಗೆ ವಕೀಲರು ಅಗತ್ಯ ಸಂದರ್ಭಗಳಲ್ಲಿ ಮಾತ್ರ ಭೇಟಿ ನೀಡಬೇಕು. ಪ್ರಕರಣದ ವಿಚಾರಣೆ ಇದ್ದರೆ ಹಾಗೂ ಕೇಸ್ ಫೈಲ್ ಮಾಡುವುದಿದ್ದರೆ ಮಾತ್ರ ಕೋರ್ಟ್ಗಳಿಗೆ ತೆರಳಬೇಕು.
ಕಡ್ಡಾಯ ಇದ್ದರಷ್ಟೇ ತಮ್ಮ ಕಕ್ಷೀದಾರರಿಗೆ ನ್ಯಾಯಾಲಯದ ಬಳಿ ಬರಲು ಹೇಳಬೇಕು. ಪ್ರಕರಣ ಮುಂದೂಡಲು ಕೋರಬೇಕಿದ್ದರೆ ಇಮೇಲ್ ಮೂಲಕವೇ ಮೆಮೋ ಕಳುಹಿಸಿ ಕೋರಬಹುದು.
ನ್ಯಾಯಾಲಯಗಳ ಸುಗಮ ಕಲಾಪ ಮುಂದುವರೆಯಲು ವಕೀಲರ ಸಹಕಾರ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ವಕೀಲರು ಸಹಕಾರ ನೀಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ಓಕ ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.