ಬೆಂಗಳೂರು : ನ್ಯಾಯಾಲಯ ನಿರ್ದೇಶನ ನೀಡಿದ ನಂತರವೂ ಕುಶಾಲನಗರದ ತಾವರೆಕೆರೆ ಒತ್ತುವರಿ ತೆರವು ಸಮೀಕ್ಷೆ ನಡೆಸದ ಕೊಡಗು ಜಿಲ್ಲಾಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಸಂಬಂಧ ಡಿಸಿ ಜೂನ್ 23ರಂದು ಖುದ್ದಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ ವಿವರಣೆ ನೀಡುವಂತೆ ಆದೇಶಿಸಿದೆ.
ಕೊಡಗು ಜಿಲ್ಲೆ ಕುಶಾಲನಗರದ ತಾವರೆಕೆರೆ ಒತ್ತುವರಿ ತೆರವು ಮಾಡಲು ಮತ್ತು ಸಂರಕ್ಷಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ನಗರದ ವಕೀಲ ಎನ್.ಪಿ ಅಮೃತೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ, ಅರ್ಜಿದಾರರು ಪೀಠಕ್ಕೆ ಮಾಹಿತಿ ನೀಡಿ, ಕೆರೆ ಒತ್ತುವರಿಯಾಗಿದೆಯೇ ಎಂಬುದನ್ನು ಪರಿಶೀಲಿಸಲು ಸಮೀಕ್ಷೆ ನಡೆಸಿ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಹಿಂದಿನ ವಿಚಾರಣೆ ಸಂದರ್ಭದಲ್ಲಿ ಕೊಡಗು ಜಿಲ್ಲಾಧಿಕಾರಿಗೆ ನಿರ್ದೇಶಿಸಿತ್ತು. ಆದರೆ ಇಂದಿಗೂ ಸಮೀಕ್ಷೆ ನಡೆಸಿಲ್ಲ. ಆ ನಿಟ್ಟಿನಲ್ಲಿ ಪ್ರಯತ್ನವೂ ಆಗಿಲ್ಲ ಎಂದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಜಿಲ್ಲಾಧಿಕಾರಿ ಈವರೆಗೆ ಆದೇಶ ಪಾಲನೆಗೆ ಕ್ರಮ ಕೈಗೊಂಡಿಲ್ಲವೇಕೆ ಎಂದು ಸರ್ಕಾರಿ ವಕೀಲರನ್ನು ಪ್ರಶ್ನಿಸಿತು. ಅಲ್ಲದೆ, ಜೂನ್ 23ರಂದು ಡಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ ಏಕೆ ಸಮೀಕ್ಷೆ ಮಾಡಿಲ್ಲ ಎಂಬ ಕುರಿತು ವಿವರಣೆ ನೀಡಬೇಕು ಎಂದು ನಿರ್ದೇಶಿಸಿ, ವಿಚಾರಣೆ ಮುಂದೂಡಿತು.
ಅರ್ಜಿದಾರರ ಕೋರಿಕೆ - ಕೊಡಗಿನ ಕುಶಾಲನಗರದಿಂದ ನಿಸರ್ಗಧಾಮಕ್ಕೆ ಹೋಗುವ ಮಾರ್ಗದಲ್ಲಿರುವ ತಾವರೆಕೆರೆ ದಾಖಲೆಗಳ ಪ್ರಕಾರ 19 ಎಕರೆ ಇದೆ. ಆದರೆ, ಈ ಕೆರೆ ಮತ್ತು ಸುತ್ತಲಿನ ಜಾಗವನ್ನು ಹಲವು ಪ್ರಭಾವಿಗಳು ಒತ್ತುವರಿ ಮಾಡಿ, ಹೋಂ ಸ್ಟೇ, ಕಾಲೇಜು, ವಿಲ್ಲಾಗಳನ್ನು ನಿರ್ಮಿಸಿದ್ದಾರೆ. ಇಂತಹ ಒತ್ತುವರಿಗಳಿಂದಾಗಿ ಕೆರೆ ಇದೀಗ ಕೇವಲ 1 ಎಕರೆ 30 ಗುಂಟೆಗೆ ಕುಗ್ಗಿದೆ.
ಕೆರೆ ಪಕ್ಕದ ಕೃಷಿ ಜಾಗವನ್ನು ವಸತಿ ಪ್ರದೇಶಕ್ಕೆ ಪರಿವರ್ತಿಸಿಕೊಂಡು ರಾಜಕಾಲುವೆ ಮುಚ್ಚಿದ್ದರಿಂದ ಕೆರೆ ಅವನತಿ ಅಂಚಿಗೆ ತಲುಪಿದೆ. ಜತೆಗೆ ಮಳೆ ನೀರು ಹರಿದು ಹೋಗಲು ಸಾಧ್ಯವಾಗದೆ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೆರೆ ಒತ್ತುವರಿ ತೆರವು ಮಾಡಿ ಸಂರಕ್ಷಿಸಲು ಸರ್ಕಾರ ಮತ್ತು ಸಂಬಂಧಿತ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಬೇಕೆಂದು ಎಂದು ಅರ್ಜಿಯಲ್ಲಿ ಕೋರಲಾಗಿದೆ.