ಬೆಂಗಳೂರು: ಕಾಂಗ್ರೆಸ್ ಪರಿಸ್ಥಿತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ ಕಾಂಗ್ರೆಸ್ ನಿಂತ ನೀರಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕಾಂಗ್ರೆಸ್ ಪಕ್ಷದ ಚಟುವಟಿಕೆಗಳು ಕುಂಠಿತವಾಗಿದೆ. ಅತ್ತ ಕಡೆ ಕೆಪಿಸಿಸಿ ಅಧ್ಯಕ್ಷರ ರಾಜೀನಾಮೆ ಅಂಗೀಕಾರವೂ ಆಗಿಲ್ಲ, ತಿರಸ್ಕಾರವೂ ಆಗಿಲ್ಲ. ಹಾಗಾಗಿ ಎಲ್ಲವೂ ಹೈಕಮಾಂಡ್ ನಿರ್ಧಾರ ಎಂದು ನಾಯಕರು ಹೇಳುತ್ತಾರೆ. ಆದರೆ ತಾವೇ ಹೈಕಮಾಂಡ್ಗೆ ಹೋಗಿ ಕಂಡಿಷನ್ ಹಾಕಿ ಬರ್ತಾರೆ. ಏನೇ ಕಂಡೀಷನ್ ಹಾಕಿ ಬಂದಿರಲಿ. ಆದರೆ, ಎಲ್ಲರೂ ಒಗ್ಗಟ್ಟಾಗಿ ಪಕ್ಷದ ಹಿತದೃಷ್ಠಿಯಿಂದ ಎಲ್ಲ ನಾಯಕರು ಹೈಕಮಾಂಡ್ಗೆ ಸಂಪೂರ್ಣ ಅಧಿಕಾರವನ್ನು ಬಿಟ್ಟುಕೊಡಬೇಕೆಂದು ಕಾಂಗ್ರೆಸ್ನ ಕಾರ್ಯಕರ್ತನಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಇನ್ನು ಕಾಂಗ್ರೆಸ್ ಹೈಕಮಾಂಡ್ ಯಾವಾಗಲೂ ಅತ್ಯಂತ ಶಕ್ತಿಯುತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗುಂಪುಗಾರಿಕೆ ಮಾಡುವವರೆಲ್ಲರೂ ಸಂಪೂರ್ಣ ಸ್ವಾತಂತ್ರ್ಯವನ್ನು ಹೈಕಮಾಂಡ್ಗೆ ಬಿಟ್ಟುಕೊಟ್ಟರೆ ಪಕ್ಷಕ್ಕೆ ಒಳ್ಳೆಯದು, ಇದನ್ನೇ ಮುಂದುವರಿಸಿಕೊಂಡು ಹೋದರೆ ಪಕ್ಷದಲ್ಲಿ ಕ್ರಾಂತಿಯನ್ನೇ ಮಾಡಬೇಕಾಗುತ್ತದೆ ಎಂದರು.