ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ 2023ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯಲಿದೆ. ಮೊದಲ ದಿನ ಕನ್ನಡ ಹಾಗೂ ಅರೇಬಿಕ್ ಭಾಷಾ ಪರೀಕ್ಷೆಗಳು ನಡೆಯುತ್ತಿದೆ. ಬೆಳಗ್ಗೆ 10.15 ಗಂಟೆಯಿಂದ ಮಧ್ಯಾಹ್ನ 1.30ರ ವರೆಗೆ ಪರೀಕ್ಷೆ ಇರಲಿದೆ. ಈ ಸಲ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಲ್ಲ ವಿಷಯಗಳಲ್ಲೂ 20 ಅಂಕಗಳ ಬಹು ಆಯ್ಕೆಯ ಪ್ರಶ್ನೆಗಳು ಇರಲಿದೆ.
ಪಿಯುಸಿ ಪರೀಕ್ಷೆಯು ಇಂದಿನಿಂದ ಮಾರ್ಚ್ 29ರವರೆಗೆ ನಡೆಯಲಿದ್ದು, ರಾಜ್ಯದ 5,716 ಕಾಲೇಜುಗಳಿಂದ 7.27 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಸಿದ್ಧರಾಗಿದ್ದಾರೆ. ರಾಜ್ಯಾದ್ಯಂತ 1,109 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಅಲ್ಲದೆ, ಕಲಾ ವಿಭಾಗದಲ್ಲಿ 2,34,815, ವಾಣಿಜ್ಯ ವಿಭಾಗದಲ್ಲಿ 2,47,269 ಹಾಗೂ ವಿಜ್ಞಾನ ವಿಭಾಗದಲ್ಲಿ 2,44,129 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಹಾಜರಾತಿ ಕೊರತೆಯಿಂದ 4,492 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯಿಂದ ಹೊರಗುಳಿಯಲಿದ್ದಾರೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಈ ವರ್ಷದಿಂದ ಶೇ.75 ರಷ್ಟು ಕಡ್ಡಾಯ ಹಾಜರಾತಿ ನಿಯಮವನ್ನು ಮರಳಿ ತಂದಿದೆ. ಹೀಗಾಗಿ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಗೆ 4,492 ವಿದ್ಯಾರ್ಥಿಗಳು ಗೈರು ಹಾಜರಾಗಲಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮಾರ್ಚ್ 9ರಿಂದ ಮಾರ್ಚ್ 29 ರವರೆಗಿನ ದ್ವಿತೀಯ ಪಿಯುಸಿ ಪರೀಕ್ಷೆಯ ದಿನಾಂಕಗಳಲ್ಲಿ, ಪರೀಕ್ಷೆಗೆ ಹಾಜರಾಗುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ನಿವಾಸದಿಂದ ಗೊತ್ತುಪಡಿಸಿದ ಪರೀಕ್ಷಾ ಕೇಂದ್ರಕ್ಕೆ ಮತ್ತು 'ದ್ವಿತೀಯ ಪಿಯುಸಿ ಪರೀಕ್ಷೆಯ ಪ್ರವೇಶ ಪತ್ರ' ತೋರಿಸುವ ಮೂಲಕ ಉಚಿತವಾಗಿ ಪ್ರಯಾಣಿಸಬಹುದು.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಅಡಿಯಲ್ಲಿ ನಡೆಯಲಿದೆ. ಮಂಡಳಿಯ ಸೂಚನೆಯಂತೆ ಈಗಾಗಲೇ ಆಯಾ ಜಿಲ್ಲಾ ಉಪನಿರ್ದೇಶಕರ ಮಾರ್ಗದರ್ಶನದಲ್ಲಿ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. "ಸಂಪೂರ್ಣವಾಗಿ ನಕಲು ಅಥವಾ ಪರೀಕ್ಷಾ ಅಕ್ರಮ ತಡೆಗಟ್ಟಲು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ವಿದ್ಯಾರ್ಥಿಗಳು ಮತ್ತು ಕೊಠಡಿ ಪರಿಚಾರಕರು, ಗುಪ್ತಚರ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ನೀಡಲಾಗಿದೆ. ನಕಲು ತಡೆಯಲು ಜಾಗೃತ ದಳವನ್ನು ನೇಮಿಸಲಾಗಿದ್ದು, ಪರೀಕ್ಷಾ ಕೇಂದ್ರಗಳ ಬಳಿ ಸಿಸಿಟಿವಿ ಅಳವಡಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಬಳಿ ಇರುವ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಸೂಚನೆ ನೀಡಲಾಗಿದೆ" ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ ಪರಿಕರಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪರೀಕ್ಷೆಯ ಸುರಕ್ಷತೆ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾ ಮಟ್ಟದಲ್ಲಿ ತಂಡ ಹಾಗೂ ತಾಲೂಕು ಮಟ್ಟದಲ್ಲಿ ಪ್ರತ್ಯೇಕ ತಂಡ ರಚಿಸಲಾಗಿದೆ. ಪ್ರಶ್ನೆ ಪತ್ರಿಕೆ ವಿತರಣಾ ತಂಡಗಳಿಗೆ ಮಾರ್ಗಗಳನ್ನು ಗುರುತಿಸಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ಹಿಜಾಬ್ ನಿಷೇಧ: ಈಗಾಗಲೇ ಸರ್ಕಾರದ ನಿರ್ಧಾರದಂತೆ ಪರೀಕ್ಷೆಗೆ ಬರುವವರಿಗೆ ವಸ್ತ್ರ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ. ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪರೀಕ್ಷೆ ಕೊಠಡಿಯೊಳಗೆ ಬರುವಂತಿಲ್ಲ ಎಂದು ತಿಳಿಸಲಾಗಿದೆ. ಕಳೆದ ವರ್ಷ ಸರ್ಕಾರ ಕೈಗೊಂಡ ನಿರ್ಧಾರಕ್ಕೆ ಈ ವರ್ಷವೂ ಬದ್ಧವಾಗಿದೆ. ವಸ್ತ್ರ ಸಂಹಿತೆ ವಿಚಾರದಲ್ಲಿ ಹೈಕೋರ್ಟ್ ಸ್ಪಷ್ಟ ಆದೇಶ ನೀಡಿದ್ದು, ಅದರ ಪಾಲನೆ ಮಾಡಲಾಗುವುದು ಎಂದು ಕೆಲದಿನಗಳ ಹಿಂದೆ ಸ್ವತಃ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದರು.
-
ಇಂದಿನಿಂದ ಆರಂಭವಾಗಲಿರುವ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಸಜ್ಜಾಗಿರುವ ನನ್ನೆಲ್ಲಾ ಪ್ರೀತಿಯ ವಿದ್ಯಾರ್ಥಿಗಳಿಗೆ ಶುಭಾಶಯಗಳು. ಭಯ, ಆತಂಕ ಬಿಟ್ಟು ಧೈರ್ಯದಿಂದ, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ, ಯಶಸ್ಸು ನಿಮ್ಮದಾಗಲಿ. pic.twitter.com/raVKAfRHU1
— Basavaraj S Bommai (@BSBommai) March 9, 2023 " class="align-text-top noRightClick twitterSection" data="
">ಇಂದಿನಿಂದ ಆರಂಭವಾಗಲಿರುವ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಸಜ್ಜಾಗಿರುವ ನನ್ನೆಲ್ಲಾ ಪ್ರೀತಿಯ ವಿದ್ಯಾರ್ಥಿಗಳಿಗೆ ಶುಭಾಶಯಗಳು. ಭಯ, ಆತಂಕ ಬಿಟ್ಟು ಧೈರ್ಯದಿಂದ, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ, ಯಶಸ್ಸು ನಿಮ್ಮದಾಗಲಿ. pic.twitter.com/raVKAfRHU1
— Basavaraj S Bommai (@BSBommai) March 9, 2023ಇಂದಿನಿಂದ ಆರಂಭವಾಗಲಿರುವ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಸಜ್ಜಾಗಿರುವ ನನ್ನೆಲ್ಲಾ ಪ್ರೀತಿಯ ವಿದ್ಯಾರ್ಥಿಗಳಿಗೆ ಶುಭಾಶಯಗಳು. ಭಯ, ಆತಂಕ ಬಿಟ್ಟು ಧೈರ್ಯದಿಂದ, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ, ಯಶಸ್ಸು ನಿಮ್ಮದಾಗಲಿ. pic.twitter.com/raVKAfRHU1
— Basavaraj S Bommai (@BSBommai) March 9, 2023
ಶುಭ ಕೋರಿದ ಸಿಎಂ: ''ಇಂದಿನಿಂದ ಆರಂಭವಾಗಲಿರುವ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಸಜ್ಜಾಗಿರುವ ನನ್ನೆಲ್ಲಾ ಪ್ರೀತಿಯ ವಿದ್ಯಾರ್ಥಿಗಳಿಗೆ ಶುಭಾಶಯಗಳು. ಭಯ, ಆತಂಕ ಬಿಟ್ಟು ಧೈರ್ಯದಿಂದ, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ, ಯಶಸ್ಸು ನಿಮ್ಮದಾಗಲಿ'' ಎಂದು ದ್ವಿತೀಯ ಪಿಯು ಪರೀಕ್ಷಾರ್ಥಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮೂಲಕ ಶುಭ ಕೋರಿದ್ದಾರೆ.
ಇದನ್ನೂ ಓದಿ: ಪಿಯು ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ: 1 ಅಂಕದ 20 ಬಹುಮಾದರಿಯ ಪ್ರಶ್ನೆಗೆ ಆದ್ಯತೆ