ಬೆಂಗಳೂರು: ಬೆಂಗಳೂರಿನ ಜಪಾನ್ ರಾಯಬಾರಿ ಕಚೇರಿ ಸದಸ್ಯರ ಬೆಂಬಲದೊಂದಿಗೆ ಜಪಾನ್ ಸಂಸ್ಕೃತಿಯನ್ನು ಉತ್ತೇಜಿಸುವ ಸಲುವಾಗಿ ಮಾಂಗಾ ಪ್ಲಾನೆಟ್ ಸಂಸ್ಥೆಯು ಆಯೋಜಿಸಿದ್ದ ‘ಕಾಸ್ಟ್ಯೂಮ್ ಪ್ಲೇ’ ಕಾರ್ಯಕ್ರಮದಲ್ಲಿ ಜಪಾನ್ ಅಭಿವೃದ್ಧಿಪಡಿಸಿದ ಆನಿಮೇಷನ್ ಆಟಗಳ ಪಾತ್ರಗಳ ಪ್ರವಾಸಿಗರುವರ್ಣರಂಜಿತ ವೇಷಭೂಷಣ ಧರಿಸಿದ್ದರು. ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ನೂರಾರು ಜನರು ಮುಗಿಬಿದ್ದಿದ್ದರು.
ಕಾರ್ಟೂನ್, ಪಕ್ಷಿಗಳ ರೆಕ್ಕೆ, ಪ್ರಾಣಿಗಳಂತೆ ಧರಿಸಿದ್ದ ವೇಷ ಜನರನ್ನು ಸೂಜಿಗಲ್ಲಿನಂತೆ ಸೆಳೆದವು. ಸೈನಿಕ, ಕಮಾಂಡರ್, ಕಿಂಗ್ ಪ್ರೊಟೆಸ್ಟ್, ಸ್ಪೈಡರ್ ಮ್ಯಾನ್, ಶಕ್ತಿಮಾನ್ ವೇಷಧಾರಿಗಳು ಆ ಪಾತ್ರಗಳಂತೆ ವರ್ತಿಸಿ ಮೋಡಿ ಮಾಡಿದರು. ನಾರೋಟೊ, ಒನ್ ಫೀಸ್, ಸೂಪರ್ ಮ್ಯಾನಿಯೋಂ, ಅವತಾರ್, ಏಲಿಯನ್ಸ್ ರೂಪದಲ್ಲಿ ಕಾಣಿಸಿಕೊಂಡ ಪ್ರವಾಸಿಗರು ಜನರ ಮೆಚ್ಚುಗೆ ಪಡೆದರು. ಇದನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಬೆಂಗಳೂರಿಗರು ಆ ವೇಷಗಳನ್ನು ಕಂಡು ಮಾರುಹೋದರು. ಅಲ್ಲದೆ, ತಮಗಿಷ್ಟದ ಪಾತ್ರದಾರಿಗಳ ವೇಷ ಧರಿಸಿದ ಪ್ರವಾಸಿಗರೊಂದಿಗೆ ಸೆಲ್ಫಿ ಮತ್ತು ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.
ಆನಿಮೇಷನ್ ಗೇಮ್ಸ್ ಪಾತ್ರಗಳ ವೇಷ ಧರಿಸಲು 200 ಮಂದಿಗೆ ಮಾತ್ರ ನೋಂದಣಿಗೆ ಅವಕಾಶ ನೀಡಲಾಗಿತ್ತು. ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಅವರಿಗೂ ವೇಷ ಧರಿಸಲು ಅವಕಾಶ ಮಾಡಿಕೊಡಲಾಯಿತು. ವಿಷಯ ತಿಳಿಯುತ್ತಿದ್ದಂತೆ ತಮ್ಮಗಿಷ್ಟದ ವೇಷಗಳನ್ನು ಧರಿಸಲು ಜನರು ಮುಗಿಬಿದ್ದರು. ಸ್ನೇಹಿತರೊಂದಿಗೆ ಬಂದಿದ್ದ ಯುವಕ-ಯುವತಿಯರು, ತಮ್ಮ ಮಕ್ಕಳೊಂದಿಗೆ ಆಗಮಿಸಿದ್ದ ಪೋಷಕರು ಈ ಅವಕಾಶ ಸದುಪಯೋಗಪಡಿಸಿಕೊಂಡು ಆ ಪಾತ್ರಗಳಂತೆ ವೇಷಧರಿಸಿದರು. ಇನ್ನು ಜಪಾನಿನ ಸಂಸ್ಕೃತಿಯನ್ನು ಭಾರತದಲ್ಲಿ ಪರಿಚಯಿಸುವ, ಎರಡು ದೇಶಗಳ ಸಂಬಂಧ ಮತ್ತಷ್ಟು ಗಟ್ಟಿಗೊಳಿಸಲು, ಉತ್ತಮ ಬಾಂಧವ್ಯ ಬೆಸೆಯಲು ಮತ್ತು ಪ್ರವಾಸೋಧ್ಯಮ ಹೆಚ್ಚಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.
ಇದೇ ವೇಳೆ ಜಪಾನ್ ಏರ್‌ಲೈನ್ಸ್‌ನಿಂದ ಬೆಂಗಳೂರು-ಟೋಕಿಯೋಗೆ ನೇರವಾಗಿ ತಲುಪಲು ವಿಮಾನ ಆರಂಭಿಸಿಲಾಗಿದೆ. ಇಲ್ಲಿಂದ ಕೇವಲ ಒಂಬತ್ತು ಗಂಟೆಯೊಳಗೆ ಅಲ್ಲಿಗೆ ಸೇರಬಹುದು. ಇದಕ್ಕೂ ಮುನ್ನ ನವದೆಹಲಿ, ಚೆನ್ನೈಗೆ ಹೋಗಿ ಟೋಕಿಯೋಗೆ ಪ್ರಯಾಣಿಸಬಹುದಾಗಿದೆ. ವ್ಯಾಪಾರ ದೃಷ್ಟಿಯಿಂದಲೂ ಇದು ಸಹಕಾರಿ ಆಗಲಿದೆ ಎಂದು ರಾಯಬಾರಿ ಕಚೇರಿಯ ಕೌನ್ಸ್‌ಲೇಟ್ ಜನರಲ್ ಟಕಾಯುಕಿ ಕಿತಾಗವ ಹೇಳಿದರು.