ಬೆಂಗಳೂರು: ಇಂದು ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹುಬ್ಬಳ್ಳಿ- ಧಾರವಾಡ ಕೇಂದ್ರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ ಫಾರಂ ಸಹ ಸ್ವೀಕರಿಸಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಇಂದು ಸೇರ್ಪಡೆ ಸಮಾರಂಭ ಹಾಗೂ ಸುದ್ದಿಗೋಷ್ಠಿ ನಡೆಯಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಶೆಟ್ಟರ್ ಸಮಾರಂಭದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮೂಲಕ ಬಿ ಫಾರಂ ಸ್ವೀಕರಿಸಿದರು.
ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನಸಭೆ ಕ್ಷೇತ್ರದಿಂದ ಸತತ ಆರು ಬಾರಿ ಆಯ್ಕೆಯಾಗಿದ್ದ ಶೆಟ್ಟರ್ ರಾಜ್ಯ ಬಿಜೆಪಿ ರಾಜಕಾರಣದಲ್ಲಿ ವಿವಿಧ ಹುದ್ದೆಗಳನ್ನು ಅನುಭವಿಸಿದ್ದರು. ಸಚಿವ, ಪ್ರತಿಪಕ್ಷ ನಾಯಕ, ಮುಖ್ಯಮಂತ್ರಿ ಪದವಿಯನ್ನು ಅಲಂಕರಿಸಿದ್ದ ಶೆಟ್ಟರ್ ಈ ಸಾರಿ ಹೈಕಮಾಂಡ್ ತಮಗೆ ಟಿಕೆಟ್ ನಿರಾಕರಿಸಿದ್ದರಿಂದ ಬೇಸರಗೊಂಡು ಪಕ್ಷದ ಶಾಸಕ ಸ್ಥಾನ ಹಾಗೂ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದೀಗ ಕಾಂಗ್ರೆಸ್ನ ಅಧಿಕೃತ ಅಭ್ಯರ್ಥಿಯಾಗಿ ಬಿ ಫಾರಂ ಸ್ವೀಕರಿಸಿದ್ದು, 7ನೇ ಬಾರಿಗೆ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭೆ ಕ್ಷೇತ್ರದ ಶಾಸಕರಾಗುವ ಸಿದ್ಧತೆ ಆರಂಭಿಸಿದ್ದಾರೆ.
ಕಾಂಗ್ರೆಸ್ ಪಕ್ಷ ತನ್ನ ಮೂರು ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಇನ್ನೂ 15 ಅಭ್ಯರ್ಥಿಗಳ ಕೊನೆಯ ಪಟ್ಟಿ ಬಿಡುಗಡೆ ಮಾಡುವುದು ಬಾಕಿ ಉಳಿದಿದೆ. ಜಗದೀಶ್ ಶೆಟ್ಟರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಹುಬ್ಬಳ್ಳಿ- ಧಾರವಾಡ ಕೇಂದ್ರ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಯ ಆಯ್ಕೆಯನ್ನು ಸಹ ತಡೆಹಿಡಿದಿತ್ತು. ಇಂದು ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಜಗದೀಶ್ ಶೆಟ್ಟರ್ ಅವರಿಗೆ ಬಿ ಫಾರಂ ನೀಡಿದ್ದಾರೆ. ಕಳೆದ ಆರು ಅವಧಿಗೆ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದ ಶೆಟ್ಟರ್, ಅದೇ ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಲಿದ್ದಾರೆ.
ಶೆಟ್ಟರ್ ಚುನಾವಣೆಗೆ ಸ್ಪರ್ಧೆ ಮಾಡ್ತಾರೆ ಶಾಮನೂರು ಶಿವಶಂಕರಪ್ಪ: ನಮ್ ಬೀಗರು ಹುಬ್ಬಳ್ಳಿ ಧಾರವಾಡದಿಂದ ಸ್ಪರ್ಧೆ ಮಾಡ್ತಾರೆ. ಅದಕ್ಕಾಗಿ ಬಿ ಫಾರಂ ತೆಗೆದುಕೊಂಡು ಹೋಗಿದ್ದಾರೆ ಎಂದು ಕಾಂಗ್ರೆಸ್ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ದಾವಣಗೆರೆಯಲ್ಲಿ ತಿಳಿಸಿದರು. ಅವರ ನಿವಾಸದಲ್ಲಿ ಮಾತನಾಡಿದ ಶಾಮನೂರು, ಜಗದೀಶ್ ಶೆಟ್ಟರ್ ಅವರು ಈಗಾಗಲೇ ಪಕ್ಷ ಸೇರ್ಪಡೆಯಾಗಿದ್ದಾರೆ, ಹುಬ್ಬಳ್ಳಿಗೆ ತೆರಳುವ ಮಾರ್ಗಮಧ್ಯೆ ದಾವಣಗೆರೆಗೆ ಬಂದು, ನನ್ನ ಭೇಟಿ ಮಾಡಲಿದ್ದಾರೆ. ನಾನು ಶೆಟ್ಟರ್ ಅವರನ್ನು ಭೇಟಿಯಾಗಲು ಹೋಗವವನಿದ್ದೇನೆ. ಜಗದೀಶ್ ಶೆಟ್ಟರ್ ಕಾಂಗ್ರೆಸ್ಗೆ ಬಂದಿದ್ದರಿಂದ ಉತ್ತರ ಕರ್ನಾಟಕದಲ್ಲಿ ಬಲ ಬಂದಿದೆ. ಇನ್ನು ಲಿಂಗಾಯತ ನಾಯಕರು ಪಕ್ಷಕ್ಕೆ ಬರವವರಿದ್ದಾರೆ ಎಂದರು. ಲಿಂಗಾಯತ ನಾಯಕರನ್ನು ಬರುವವರನ್ನು ಬೇಡ ಎನ್ನುವುದಿಲ್ಲ. ನಮ್ಮದೇ ಸರ್ಕಾರ ಮಾಡ್ತೀವಿ, ಜಗದೀಶ್ ಶೆಟ್ಟರ್ ಅವರು ಈ ಚುನಾವಣೆಗೆ ಸ್ಪರ್ಧೆ ಮಾಡ್ತಾರೆ ಎಂದರು.
ದಾವಣಗೆರೆ ದಕ್ಷಿಣ ಬಿಜೆಪಿಯಲ್ಲಿ ಟಿಕೆಟ್ ಪ್ರಚಾರ ನಡೆಸದ ಅಭ್ಯರ್ಥಿ: ದಾವಣಗೆರೆ ದಕ್ಷಿಣ ಕ್ಷೇತ್ರ ಕೈ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಬಿಜಿ ಅಜಯ್ ಕುಮಾರನ್ನು ಪಕ್ಷ ಕಣಕ್ಕಿಳಿಸಿದೆ. ಇದರಿಂದ ಬಿಜೆಪಿ ಅಭ್ಯರ್ಥಿ ಬಿಜಿ ಅಜಯ್ ಕುಮಾರ್ ವಿರುದ್ಧ ಬಂಡಾಯ ಭುಗಿಲೆದ್ದಿದ್ದು, ಆಕಾಂಕ್ಷಿಗಳು ಸರಣಿ ಸಭೆ ಮಾಡುತ್ತಿದ್ದಾರೆ. ಟಿಕೆಟ್ ಘೋಷಣೆಯಾದ್ರು ಕೂಡ ಬಿ ಜಿ ಅಜಯ್ ಕುಮಾರ್ ತಮ್ಮ ಕ್ಷೇತ್ರದಲ್ಲಿ ಕಾಣಿಸಿಕೊಳ್ಳದೆ ಪ್ರಚಾರ ಕೂಡ ಮಾಡದೆ ಇರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಎಲ್ಲವೂ ಉತ್ತಮವಾಗಿದೆ.. ಪಕ್ಷವನ್ನು ಬೆಳೆಸಲು ಶ್ರಮಿಸುತ್ತೇನೆ: ಜಗದೀಶ್ ಶೆಟ್ಟರ್