ಬೆಂಗಳೂರು: ಕಳೆದ ನಾಲ್ಕು ದಿನಗಳ ಹಿಂದೆ ಡಿಜಿಯಾಗಿ ಬಡ್ತಿ ಹೊಂದಿದ್ದ ಹಿರಿಯ ಐಪಿಎಸ್ ಅಧಿಕಾರಿ ಟಿ.ಸುನೀಲ್ ಕುಮಾರ್ ಇಂದು ನಿವೃತ್ತಿಯಾಗುತ್ತಿದ್ದಾರೆ. ನಿವೃತ್ತಿಗೆ ಇನ್ನೂ ಮೂರು ದಿನ ಬಾಕಿ ಉಳಿದಿರುವಂತೆ ರಾಜ್ಯ ಸರ್ಕಾರವು ಭ್ರಷ್ಟಾಚಾರ ನಿಗ್ರಹ ಸಂಸ್ಥೆ (ಎಸಿಬಿ) ಎಡಿಜಿಪಿಯಾಗಿದ್ದ ಅವರನ್ನು ಸಿಐಡಿ ವಿಶೇಷ ಆರ್ಥಿಕ ಅಪರಾಧ ವಿಭಾಗದ ಡಿಜಿಪಿಯಾಗಿ ಬಡ್ತಿ ನೀಡಿತ್ತು. ಆದರೆ ಡಿಜಿಯಾಗಿ ಕೆಲಸ ಮಾಡಿದ್ದು ಒಂದೇ ದಿನ ಮಾತ್ರ.
ಅ. 28ರಂದು ಎಡಿಜಿಪಿ ಶ್ರೇಣಿಯಿಂದ ಡಿಜಿ ಶ್ರೇಣಿಗೆ ಪ್ರಮೋಷನ್ ನೀಡಲಾಗಿತ್ತು. ಅ. 29ರಂದು ಸಿಐಡಿ ಆರ್ಥಿಕ ಅಪರಾಧ ವಿಭಾಗದ ಡಿಜಿಯಾಗಿ ಕಾರ್ಯನಿರ್ವಹಿಸಿದರು. ಅ. 30ರಂದು ಈದ್ ಮಿಲಾದ್ ಹಾಗೂ ಇಂದು ವಾಲ್ಮೀಕಿ ಜಯಂತಿ ಹಿನ್ನೆಲೆ ಸರ್ಕಾರಿ ರಜೆ ಇರುವ ಕಾರಣದಿಂದ ಒಂದೇ ದಿನ ಕೆಲಸ ಮಾಡಲು ಸಾಧ್ಯವಾಗಿತ್ತು.
ಸುನೀಲ್ ಕುಮಾರ್ ಡಿಜಿಪಿಯಾಗಿ ಪ್ರಮೋಷನ್ ನೀಡುತ್ತಿದ್ದಂತೆ ಅರಣ್ಯ ಇಲಾಖೆಯ ಎಡಿಜಿಪಿಯಾಗಿದ್ದ ರವೀಂದ್ರನಾಥ್ ಅಸಮಾಧಾನ ವ್ಯಕ್ತಪಡಿಸಿ ಕರ್ತವ್ಯಕ್ಕೆ ರಾಜೀನಾಮೆ ನೀಡಿದ್ದರು. ತಮಗಿಂತ ಕಿರಿಯ ಸ್ಥಾನದಲ್ಲಿರುವವರಿಗೆ ಬಡ್ತಿ ನೀಡಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಡಿಜಿ, ಐಜಿಪಿ ಪ್ರವೀಣ್ ಸೂದ್ಗೆ ರಾಜೀನಾಮೆ ಪತ್ರ ರವಾನಿಸಿದ್ದರು. ಸದ್ಯ ರಾಜೀನಾಮೆ ಪತ್ರ ಸ್ವೀಕರಿಸಿರುವ ಪ್ರವೀಣ್ ಸೂದ್, ರಾಜ್ಯ ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರಿಗೆ ಸಲ್ಲಿಸಿದ್ದಾರೆ.